ಲಾಹೋರ್: ಭಾರತ-ಪಾಕಿಸ್ತಾನ ವಿಭಜನೆಯಾಗಿ ಸುಮಾರು ಎಂಟು ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಲಾಹೋರ್‌ನ ಬೀದಿಗಳು ಇಸ್ಲಾಮೀಕರಣದಿಂದ ಈಗ ಪುನಃ ಹಳೆಯ ಇತಿಹಾಸಕ್ಕೆ ಮರಳುತ್ತಿವೆ. ಲಾಹೋರಿನ ಬೀದಿಗಳಿಗೆ ವಿಭಜನೆಯ ನಂತರ ಬದಲಾಯಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಹೆಸರುಗಳನ್ನು ಕೈಬಿಟ್ಟು, ಪಾಕಿಸ್ತಾನ ವಿಭಜನೆಗೂ ಮುನ್ನ ಇದ್ದ ಮೂಲ ಹಿಂದೂ, ಸಿಖ್, ಜೈನ್ ಹಾಗೂ ಬ್ರಿಟಿಷ್ ವಸಾಹತುಶಾಹಿ ಕಾಲದ ಹೆಸರುಗಳನ್ನೇ ಮರುನಾಮಕರಣ ಮಾಡಲಾಗುತ್ತಿದೆ….!
ಕಳೆದ ಕೇವಲ ಎರಡು ತಿಂಗಳಲ್ಲಿ ಲಾಹೋರ್‌ನ ಕನಿಷ್ಠ ಒಂಬತ್ತು ಪ್ರಮುಖ ಸ್ಥಳಗಳ ಹೆಸರುಗಳನ್ನು ಅಧಿಕೃತವಾಗಿ ಬದಲಾಯಿಸಲಾಗಿದ್ದು, ಈ ಪಟ್ಟಿಯಲ್ಲಿ ಇನ್ನು ನೂರಾರು ಹೆಸರುಗಳು ಬದಲಾವಣೆಗೆ ಸಜ್ಜಾಗಿವೆ. ಬದಲಾದ ಹೆಸರುಗಳ ಪಟ್ಟಿಯ ಪ್ರಕಾರ, ಲಾಹೋರಿನ ಇಸ್ಲಾಂಪುರ ಪ್ರದೇಶಕ್ಕೆ ‘ಕೃಷ್ಣ ನಗರ’ ಎಂದು ವಿಭಜನೆಯ ಮೊದಲಿದ್ದ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ. ಬಾಬರಿ ಮಸೀದಿ ಚೌಕಕ್ಕೆ ‘ಜೈನ್ ಮಂದಿರ ಚೌಕ’ ಎಂದು ಈ ಹಿಂದಿನ ಹೆಸರನ್ನೇ ಮರುನಾಕರಣ ಮಾಡಲಾಗಿದೆ. ರೆಹಮಾನ್ ಗಲ್ಲಿ ಪ್ರದೇಶಕ್ಕೆ ‘ರಾಮ ಗಲ್ಲಿ’ ಎಂದು ಮರುನಾಮಕರಣ ಮಾಡಲಾಗಿದೆ.
‘ಲಾಹೋರ್ ಹೆರಿಟೇಜ್ ಏರಿಯಾ ರಿವೈವಲ್’ ಯೋಜನೆ
ಪಾಕಿಸ್ತಾನದ ಪಂಜಾಬ್ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯಿಂದ ಕೈಗೆತ್ತಿಕೊಂಡಿರುವ ‘ಲಾಹೋರ್ ಹೆರಿಟೇಜ್ ಏರಿಯಾ ರಿವೈವಲ್’ (ಲಾಹೋರ್ ಪರಂಪರೆ ಪ್ರದೇಶ ಪುನರುಜ್ಜೀವನ) ಯೋಜನೆಯ ಭಾಗವಾಗಿ ಈ ಐತಿಹಾಸಿಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ದಶಕಗಳ ನಿರ್ಲಕ್ಷ್ಯ, ಅಸಮರ್ಪಕ ನಗರೀಕರಣ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ಇತಿಹಾಸವನ್ನು ತಿರುಚಿದ್ದನ್ನು ಸರಿಪಡಿಸಿ, ಲಾಹೋರಿಗೆ ಅದರ ವಿಭಜನೆ ಪೂರ್ವದ ಬಹುಸಂಸ್ಕೃತಿಯ ವೈಭವವನ್ನು ಮರಳಿ ತರುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐರೋಪ್ಯ ದೇಶಗಳ ಮಾದರಿಯಲ್ಲಿ ಪಾಕಿಸ್ತಾನವೂ ತನ್ನ ನಗರಗಳ ಐತಿಹಾಸಿಕ ಸ್ವರೂಪವನ್ನು ಅಳಿಸಿ ಹಾಕದೆ ಉಳಿಸಿಕೊಳ್ಳಬೇಕು ಮತ್ತು ಇದರಿಂದ ಹೆರಿಟೇಜ್ ಪ್ರವಾಸೋದ್ಯಮವನ್ನು (ಪರಂಪರೆ ಪ್ರವಾಸೋದ್ಯಮ) ಉತ್ತೇಜಿಸಿ ಆದಾಯ ಗಳಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ಬದಲಾದ ಪ್ರಮುಖ ಹೆಸರುಗಳ ಪಟ್ಟಿ:
ಸುನ್ನತ್ ನಗರ-ಸಂತ ನಗರ
ಮೌಲಾನಾ ಜಾಫರ್ ಅಲಿ ಖಾನ್ ಚೌಕ -ಲಕ್ಷ್ಮಿ ಚೌಕ
ಮುಸ್ತಫಾಬಾದ್-ಧರಂಪುರ
ಫಾತಿಮಾ ಜಿನ್ನಾ ರಸ್ತೆ-ಕ್ವೀನ್ಸ್ ರಸ್ತೆ
ಅಲ್ಲಾಮಾ ಇಕ್ಬಾಲ್ ರಸ್ತೆ -ಜೈಲು ರಸ್ತೆ (Jail Road)
ಬಾಗ್-ಎ-ಜಿನ್ನಾ-ಲಾರೆನ್ಸ್ ಗಾರ್ಡನ್ಸ್
ಸರ್ ಅಗಾ ಖಾನ್ ಚೌಕ-ಡೇವಿಸ್ ರಸ್ತೆ
ಬಾಗ್-ಎ-ಜಿನ್ನಾ-ಲಾರೆನ್ಸ್ ಗಾರ್ಡನ್ಸ್
ಇಸ್ಲಾಂಪುರ-ಕೃಷ್ಣ ನಗರ
ಹಮೀದ್ ನಿಜಾಮಿ ರಸ್ತೆ-ಟೆಂಪಲ್ ಸ್ಟ್ರೀಟ್
ನಿಷ್ತಾರ್ ರಸ್ತೆ -ಬ್ರಾಂಡ್ರೆಥ್ ರಸ್ತೆ
ರೆಹಮಾನ್ ಗಲಿ ರಾಮ್ ಗಲಿ
ಬಾಬರಿ ಮಸೀದಿ ಚೌಕ – ಜೈನ್ ಮಂದಿರ ರಸ್ತೆ
ಗಾಜಿಯಾಬಾದ್-ಕುಮ್ಹಾರಪುರ
ಜೀಲಾನಿ ರಸ್ತೆ- ಔಟ್‌ಫಾಲ್ ರಸ್ತೆ
ಶಹರಾ-ಇ-ಅಬ್ದುಲ್ ಹಮೀದ್ ಬಿನ್ ಬಡೀಸ್ -ಎಂಪ್ರೆಸ್ ರಸ್ತೆ
ನವಾಜ್ ಷರೀಫ್ ಮತ್ತು ಮರ್ಯಮ್ ನವಾಜ್ ಕನಸಿನ ಯೋಜನೆ
ಈ ಬೃಹತ್ ಯೋಜನೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕನಸಿನ ಕೂಸಾಗಿದ್ದು, ಅವರ ಪುತ್ರಿ ಹಾಗೂ ಪಂಜಾಬ್ ಪ್ರಾಂತ್ಯದ ಹಾಲಿ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಇದನ್ನು ಮುನ್ನಡೆಸುತ್ತಿದ್ದಾರೆ. ಬರೋಬ್ಬರಿ 5,000 ಕೋಟಿ ರೂಪಾಯಿ (50 ಬಿಲಿಯನ್ ಪಾಕಿಸ್ತಾನಿ ರೂ.) ವೆಚ್ಚದ ಈ ಯೋಜನೆ ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಂಸ್ಕೃತಿಕ ಪುನರುಜ್ಜೀವನ ಕಾರ್ಯಕ್ರಮವಾಗಿದೆ. ಇದು ಲಾಹೋರಿನ ಬೀದಿಗಳ ಹೆಸರು ಬದಲಾಯಿಸುವುದು ಮಾತ್ರವಲ್ಲದೆ, ಈಗ ‘ಗ್ರೇಟರ್ ಇಕ್ಬಾಲ್ ಪಾರ್ಕ್’ ಎಂದು ಕರೆಯಲ್ಪಡುವ ಮೊದಲಿನ ‘ಮಿಂಟೋ ಪಾರ್ಕ್’ನಲ್ಲಿದ್ದ ಆದರೆ ಧ್ವಂಸಗೊಂಡಿದ್ದ ಮೂರು ಕ್ರಿಕೆಟ್ ಮೈದಾನಗಳು ಮತ್ತು ಸಾಂಪ್ರದಾಯಿಕ ಕುಸ್ತಿ ಅಖಾಡವನ್ನು (ಅಖಾಡಾ) ಮರುಸ್ಥಾಪಿಸಲು ನವಾಜ್ ಷರೀಫ್ ಪ್ರಸ್ತಾಪಿಸಿದ್ದಾರೆ. ಹಾಗೂ ಗ್ರೇಟರ್ ಇಕ್ಬಾಲ್ ಪಾರ್ಕ್’ಗೆ ವಿಭಜನೆ ಪೂರ್ವದ ‘ಮಿಂಟೋ ಪಾರ್ಕ್’ ಎಂದು ಮರುನಾಮಕರಣ ಮಾಡಲಾಗುತ್ತಿದೆ.
2015ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಶಹಬಾಜ್ ಷರೀಫ್ (ನವಾಜ್ ಷರೀಫ್ ಅವರ ಸಹೋದರ ಹಾಗೂ ಪಾಕಿಸ್ತಾನದ ಹಾಲಿ ಪ್ರಧಾನಿ) ಅವರು ನಗರಾಭಿವೃದ್ಧಿಯ ಹೆಸರಿನಲ್ಲಿ ಈ ಐತಿಹಾಸಿಕ ಮೈದಾನಗಳನ್ನು ಧ್ವಂಸಗೊಳಿಸಿದ್ದರು. ಇದು ಕ್ರೀಡಾಪಟುಗಳು ಮತ್ತು ಇತಿಹಾಸಕಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಹಳೆಯ ಮೈದಾನಗಳನ್ನು ಪುನರ್ ನಿರ್ಮಿಸುವ ಮೂಲಕ ಅಂದು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಷರೀಫ್ ಕುಟುಂಬ ಮುಂದಾಗಿದೆ ಎನ್ನಲಾಗಿದೆ.
ಮೈದಾನದ ಐತಿಹಾಸಿಕ ಹಿನ್ನೆಲೆ:
ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ಸೇರಿದಂತೆ ಹಲವರು ಇದೇ ಮಿಂಟೋ ಪಾರ್ಕ್‌ನ ಕ್ಲಬ್‌ಗಳಲ್ಲಿ ತರಬೇತಿ ಪಡೆದಿದ್ದರು. ವಿಭಜನೆಗೂ ಮುನ್ನ ಭಾರತದ ಖ್ಯಾತ ಕ್ರಿಕೆಟಿಗ ಲಾಲಾ ಅಮರನಾಥ ಕೂಡ ಇಲ್ಲಿ ಆಡುತ್ತಿದ್ದರು. 1978ರಲ್ಲಿ ಭಾರತ ತಂಡದೊಂದಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಲಾಲಾ ಅಮರನಾಥ ತಾವು ಆಡಿದ್ದ ‘ಕ್ರೆಸೆಂಟ್ ಕ್ರಿಕೆಟ್ ಕ್ಲಬ್’ಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು. ಅಷ್ಟೇ ಅಲ್ಲದೆ, ಇಲ್ಲಿನ ಕುಸ್ತಿ ಅಖಾಡವು ವಿಶ್ವವಿಖ್ಯಾತ ಗೂಂಗಾ ಪೆಹಲ್ವಾನ್ ಮತ್ತು ಗಾಮಾ ಪೆಹಲ್ವಾನ್ ಅವರಂತಹ ದೈತ್ಯ ಕುಸ್ತಿಪಟುಗಳ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. 1947ಕ್ಕೂ ಮುನ್ನ ಪ್ರತಿವರ್ಷ ಹಿಂದೂಗಳು ಇದೇ ಮೈದಾನದಲ್ಲಿ ದಸರಾ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದರು.
ವಿರೋಧವಿಲ್ಲದ ಬದಲಾವಣೆ: ಇದರ ಹಿಂದಿನ ರಾಜತಾಂತ್ರಿಕ ಆಟವೇನು?
ದಶಕಗಳಿಂದ ಇಸ್ಲಾಮೀಕರಣದ ಹಾದಿಯಲ್ಲಿ ಸಾಗಿಬಂದಿರುವ, ಹಿಂದೂ-ಸಿಖ್ ಮುಂತಾದ ಅಲ್ಪಸಂಖ್ಯಾತರಿಗೆ ಸೇರಿದ ಧಾರ್ಮಿಕ ಸ್ಥಳಗಳ ಧ್ವಂಸ ಹಾಗೂ ಮತಾಂತರದಂತಹ ಕಹಿ ಇತಿಹಾಸವಿರುವ ಪಾಕಿಸ್ತಾನದಲ್ಲಿ, ಈ ಮರುನಾಮಕರಣಕ್ಕೆ ಯಾವುದೇ ಪ್ರಬಲ ವಿರೋಧ ವ್ಯಕ್ತವಾಗದೇ ಇರುವುದು ಜಾಗತಿಕ ಮಟ್ಟದಲ್ಲಿ ಆಶ್ಚರ್ಯ ಮೂಡಿಸಿದೆ. ಆದರೆ ವಿಶ್ಲೇಷಕರು ಇದರ ಹಿಂದೆ ಪಾಕಿಸ್ತಾನದ ರಾಜತಾಂತ್ರಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಫ್.ಎ.ಟಿ.ಎಫ್ (FATF) ನಿಂದ ಮುಕ್ತಿ: ಭಯೋತ್ಪಾದನೆಗೆ ಧನಸಹಾಯ ನೀಡುವ ಆರೋಪದ ಮೇಲೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತೀವ್ರ ನಿಗಾದಲ್ಲಿದೆ (FATF ಕಪ್ಪು/ಬೂದು ಪಟ್ಟಿ). ಇದರಿಂದಾಗಿ ದೇಶದ ಆರ್ಥಿಕತೆಗೆ ಕೋಟ್ಯಂತರ ಡಾಲರ್ ನಷ್ಟವಾಗಿದೆ. ಈಗ ಸಾಂಸ್ಕೃತಿಕ ನಗರ ಲಾಹೋರ್‌ನ ಬೀದಿಗಳಿಗೆ ಹಾಗೂ ಸ್ಥಳಗಳಿಗೆ ವಿಭಜನೆ ಪೂರ್ವದ ಹೆಸರುಗಳನ್ನು ಮರುನಾಮಕರಣ ಮಾಡುವ ಮೂಲಕ, ಪಾಕಿಸ್ತಾನವು ಉಗ್ರಗಾಮಿ ಚಿಂತನೆಗಳಿಂದ ದೂರ ಸರಿದು ಉದಾರವಾದಿ ರಾಷ್ಟ್ರವಾಗುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇಡಲು ಪ್ರಯತ್ನಿಸುತ್ತಿದೆ.
ಐಎಂಎಫ್ (IMF) ನಂಬಿಕೆ ಗಳಿಸಲು ಪ್ರಯತ್ನ : ಸದ್ಯ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ನೀಡುವ ಸಾಲದ ಪ್ಯಾಕೇಜ್ ಮೇಲೆ ಬದುಕುತ್ತಿದೆ. ಐಎಂಎಫ್ ಕೇವಲ ಆರ್ಥಿಕ ಅಂಕಿ-ಅಂಶಗಳನ್ನು ಮಾತ್ರ ನೋಡುವುದಿಲ್ಲ, ಬದಲಿಗೆ ದೇಶದ ರಾಜಕೀಯ ಸ್ಥಿರತೆ ಮತ್ತು ಸಾಮಾಜಿಕ ವಾತಾವರಣವನ್ನೂ ಗಮನಿಸುತ್ತದೆ. ಲಾಹೋರ್‌ನ ಬಹುಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಮೂಲಕ ವಿದೇಶಿ ಹೂಡಿಕೆದಾರರು ಮತ್ತು ಜಾಗತಿಕ ಸಾಲದಾತರಿಗೆ “ಪಾಕಿಸ್ತಾನ ಸುರಕ್ಷಿತ ಮತ್ತು ಮುಕ್ತ ದೇಶ” ಎಂಬ ಸಂದೇಶ ರವಾನಿಸುವುದು ಇಸ್ಲಾಮಾಬಾದ್‌ನ ತಂತ್ರವಾಗಿದೆ ಎಂದು ಕೆಲವು ವಿಮರ್ಶಕರು ಹೇಳುತ್ತಾರೆ.
