ಖಾನಾಪುರ: ಖಾನಾಪುರ ಪಟ್ಟಣದ ದುರ್ಗಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಾಯಿಬಾಬಾ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭವು ವೈಭವದಿಂದ ನೆರವೇರಿತು. ಶಾಸಕ ವಿಠ್ಠಲ ಹಲಗೇಕರ ದೇವಸ್ಥಾನವನ್ನು ಉದ್ಘಾಟಿಸಿ, ಭಕ್ತಿ ಮಾರ್ಗದ ಮಹತ್ವದ ಬಗ್ಗೆ ಮಾತನಾಡಿದರು.
ದುರ್ಗಾನಗರದಲ್ಲಿ ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಹೋಮ-ಹವನ, ಕಳಸಾರೋಹಣ ಹಾಗೂ ಭವ್ಯ ಮೆರವಣಿಗೆಯಂತಹ ವಿವಿಧ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ಜರುಗಿದವು. ಶಾಸಕ ವಿಠ್ಠಲ ಹಲಗೇಕರ ಅವರು ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿ, ಗ್ರಾಮಸ್ಥರ ಏಕತೆ ಮತ್ತು ಸೇವಾಭಾವವನ್ನು ಶ್ಲಾಘಿಸಿದರು. ಈ ದೇವಸ್ಥಾನವು ಕೇವಲ ಪೂಜಾ ಸ್ಥಳವಲ್ಲದೆ, ಶಾಂತಿ ಮತ್ತು ಸೌಹಾರ್ದತೆಯ ಕೇಂದ್ರವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಅಮೃತ ಪಾಟೀಲ ವಹಿಸಿದ್ದರು. ಪ್ರಮೋದ ಕೋಚೇರಿ, ಸಂಜಯ ಕುಬಲ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
