ಬೆಂಗಳೂರು : ಕರ್ನಾಟಕ ರಾಜಕಾರಣದ ಪ್ರಭಾವಿ ನಾಯಕ ಸಿದ್ದರಾಮಯ್ಯಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ಆಫರ್ ಅನ್ನು ನಿರಾಕರಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮುಖ್ಯಮಂತ್ರಿಯಾಗಲು ದಾರಿ ಮಾಡಿಕೊಟ್ಟ ಗಂಟೆಗಳ ಒಳಗಾಗಿ, ತಾವು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಮತ್ತು ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ತೆರಳುವ ಪ್ರಸ್ತಾಪವನ್ನು ವಿನಮ್ರತೆಯಿಂದಲೇ ತಿರಸ್ಕರಿಸಿದ್ದೇನೆ ಎಂದು ಹೇಳಿದರು.
ಗುರುವಾರ ಬೆಳಗ್ಗೆ ತಮ್ಮ ಸರ್ಕಾರದ ಹಿರಿಯ ಸಚಿವರೊಂದಿಗೆ ನಡೆಸಿದ ಉಪಾಹಾರ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ಕಾಂಗ್ರೆಸ್ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಹೆಸರನ್ನು ಪ್ರಸ್ತಾಪಿಸಿದೆ ಇದಕ್ಕೆ ನಾನು ಒಪ್ಪಿಗೆ ನೀಡಿದ್ದೇನೆ,” ಎಂದು ಪ್ರಕಟಿಸಿದ್ದರು. ಆದರೆ, ಸಂಜೆ ವೇಳೆಗೆ ಹೈಕಮಾಂಡ್ ತಮಗೆ ನೀಡಿದ್ದ ‘ರಾಜ್ಯಸಭಾ’ ಆಫರ್ ಅನ್ನು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ‘ನೋ’
“ಹೈಕಮಾಂಡ್ ನನಗೆ ರಾಜ್ಯಸಭೆಗೆ ಹೋಗುವಂತೆ ಸೂಚಿಸಿತ್ತು. ಆದರೆ ನಾನು ಅದಕ್ಕೆ ‘ಇಲ್ಲ’ ಎಂದು ಹೇಳಿದ್ದೇನೆ. ನನಗೆ ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ನಾನು ರಾಜ್ಯದಲ್ಲೇ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಸಭೆಗೆ ಹೋಗುವಂತೆ ನನಗೆ ಸೂಚಿಸಲಾಯಿತು. ಆದರೆ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ನಯವಾಗಿ ಹೇಳಿದ್ದೇನೆ. ನನಗೆ ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇದೆ. ಜನರು ನನ್ನನ್ನು 5 ವರ್ಷಗಳ ಕಾಲ ಆಯ್ಕೆ ಮಾಡಿದ್ದಾರೆ, ಇನ್ನೂ 2 ವರ್ಷಗಳು ಉಳಿದಿವೆ. ನಾನು ಇಲ್ಲೇ ಇರುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರು ಸಂಜೆ ದೆಹಲಿಗೆ ತೆರಳಲಿದ್ದಾರೆ.
ರಾಹುಲ್ ಗಾಂಧಿ ನೀಡಿದ್ದ ಸಂದೇಶವೇನು?
ಕಳೆದ ಮಂಗಳವಾರ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ 35 ನಿಮಿಷಗಳ ಸುದೀರ್ಘ ಆಪ್ತ ಸಮಾಲೋಚನೆಯಲ್ಲಿ ಈ ನಿರ್ಣಾಯಕ ಸಂದೇಶ ರವಾನಿಸಲಾಗಿತ್ತು. “ಕರ್ನಾಟಕದಿಂದ ಆಚೆಗೆ ನೋಡಿ,” ಎಂಬ ಸ್ಪಷ್ಟ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದರು. ಜೊತೆಗೆ ಶೀಘ್ರದಲ್ಲೇ ತೆರವಾಗಲಿರುವ ರಾಜ್ಯದ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಒಂದನ್ನು ಸಿದ್ದರಾಮಯ್ಯ ಅವರಿಗೆ ನೀಡುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದರು. ಮುಂಬರುವ 2028ರ ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತು 2029ರ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಬೇಕಿದೆ ಎಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರಿಗೆ ತಿಳಿಸಿದ್ದರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಆದರೆ, ಹೈಕಮಾಂಡ್‌ನ ಈ ರಾಜೀ ಸೂತ್ರವನ್ನು ನಿರಾಕರಿಸಿರುವ ಸಿದ್ದರಾಮಯ್ಯ, ರಾಜ್ಯ ರಾಜಕೀಯದಲ್ಲೇ ಉಳಿಯುವ ಮೂಲಕ ಹೈಕಮಾಂಡ್‌ಗೆ ಹೊಸ ಸವಾಲೊಡ್ಡಿದ್ದಾರೆ.
