ಬೆಳಗಾವಿ: ಬೆಳಗಾವಿಯ ಯುವಕನೊಬ್ಬ ಮಹಿಳೆಯ ಖಾಸಗಿ ಜೀವನದ ಫೋಟೋಗಳನ್ನು ಆಕೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ದೊರೆತ ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಇಸೂರು ಗ್ರಾಮದ ನಿವಾಸಿ ಸುನೀಲ್ ಅಡಗಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಆರೋಪಿ ಮತ್ತು ಸಂತ್ರಸ್ತ ಮಹಿಳೆ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಪರಿಚಯ ಆತ್ಮೀಯತೆಗೆ ತಿರುಗಿ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ವಿವಿಧ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು. ಈ ಸಮಯದಲ್ಲಿ, ಆರೋಪಿಯು ಮಹಿಳೆಯ ಕೆಲವು ಖಾಸಗಿ ಫೋಟೋಗಳನ್ನು ಅವಳಿಗೆ ತಿಳಿಯದಂತೆ ತನ್ನ ಮೊಬೈಲ್ ಫೋನ್‌ನಲ್ಲಿ ತೆಗೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಈ ಫೋಟೋಗಳನ್ನು ಮಹಿಳೆಯ ಪತಿ, ಸಹೋದರರು ಮತ್ತು ಇತರ ನಿಕಟ ಸಂಬಂಧಿಗಳ ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ಮಹಿಳೆಯ ಮೊಬೈಲ್ ಫೋನ್‌ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡುತ್ತಲೇ ಇದ್ದ. ಆರೋಪಿಯ ಪ್ರಮುಖ ಉದ್ದೇಶ ಮಹಿಳೆಯ ಮಾನಹಾನಿ ಮತ್ತು ಆಕೆಯ ಗೌಪ್ಯತೆಯನ್ನು ಉಲ್ಲಂಘಿಸುವುದಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದು ಸೈಬರ್ ಅಪರಾಧ ಮತ್ತು ಮಹಿಳೆಯರ ಗೌಪ್ಯತೆಗೆ ಸಂಬಂಧಿಸಿದ ಗಂಭೀರ ಪ್ರಕರಣವಾಗಿರುವುದರಿಂದ, ಸಿಇಎನ್ ಪೊಲೀಸರು ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ, ಪೊಲೀಸರು ಆರೋಪಿಯ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ತನಿಖೆ ನಡೆಸುತ್ತಿದ್ದಾರೆ.