ಬೆಳಗಾವಿ : ಚಿಕ್ಕೋಡಿಯ ಗುರುವಾರ ಪೇಟೆಯ ಜಯಶ್ರೀ ಗಾರ್ಮೆಂಟ್ಸ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದಾಗಿ ಲಕ್ಷಾಂತರ ರೂ.ಮೌಲ್ಯದ ಬಟ್ಟೆ ಹಾಗೂ ಪೀಠೋಪಕರಣ ಸುಟ್ಟು ಹೋಗಿದೆ.
ಗುರುವಾರ ರಾತ್ರಿ ಅಂದಾಜು 10.30 ರಿಂದ 11.00 ಗಂಟೆ ಅವಧಿಯಲ್ಲಿ ಈ ಅನಾಹುತ ಸಂಭವಿಸಿದೆ. ಅಂಗಡಿಯ ಮಾಲೀಕರು ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ತೆರಳಿದ್ದರು. ಕೆಲವೇ ಸಮಯದ ಬಳಿಕ ಅಂಗಡಿಯ ಒಳಗಿನಿಂದ ದಟ್ಟವಾದ ಹೊಗೆ, ಬೆಂಕಿ ಹೊರಬರಲು ಆರಂಭಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಹೊಗೆ ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಂಗಡಿಯಲ್ಲಿದ್ದ ಹೆಚ್ಚಿನ ಪ್ರಮಾಣದ ಬಟ್ಟೆಗಳು ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.