ವಿಜಯಪುರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಘಟನೆ ಜಿಲ್ಲೆಯ ಚಡಚಣದ ಗೋವಿಂದಪುರದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದೆ.
ಎರಡು ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಚಂದು ನಿರಾಳೆ(56), ದುಂಡಪ್ಪ ನಿರಾಳೆ(65), ಶಿವಪುತ್ರ ನಿರಾಳೆ(60), ರಾಹುಲ್ ನಿರಾಳೆ(35), ಸಮರ್ಥ ನಿರಾಳೆ(24), ಶಬ್ಬಿರ್ ನದಾಫ್ (50) ಕೊಲೆಯಾದವರು ಎಂದು ತಿಳಿದುಬಂದಿದೆ. ಜ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಚಡಚಣ ಪಟ್ಟಣದ ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಸುಮಾರು 24 ಎಕರೆ ಜಮೀನನ್ನು ಆರು ತಿಂಗಳ ಹಿಂದೆ ಖರೀದಿ ಮಾಡಲು ಮುಂದಾಗಿತ್ತು. ಆದರೆ ಈ ಜಮೀನಿಗೆ ಸಂಬಂಧಿಸಿ ಜಮೀನು ಮಾರಿದ ಕುಟುಂಬಕ್ಕೂ ಮತ್ತೊಂದು ಕುಟುಂಬಕ್ಕೂ ವಿವಾದ ಇದ್ದು, ಅವರು ಜಮೀನು ಖರೀದಿಸದಂತೆ ನಿರಾಳಿ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು. ಈಗ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಕೃಷಿಗಾಗಿ ಸಿದ್ಧಗೊಳಿಸುತ್ತಿರುವಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ, ಆರು ಮಂದಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವಗಳನ್ನು ಚಡಚಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ಕೊಲೆಗಾರರು ಯಾರು ಎಂಬ ಮಾಹಿತಿ ಇನ್ನೂ ಖಚಿತವಾಗಿಲ್ಲ. ಈ ಕುರಿತು ತನಿಖೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
