ಭೋಪಾಲ್ : ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ನೈಜ ಘಟನೆ. ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಿರೋಜಾ ಖಾತೂನ್ ಎಂಬ ಮಹಿಳಾ ಅಧಿಕಾರಿಯೊಬ್ಬರು, ಅದೇ ಜೈಲಿನಲ್ಲಿ ಕೊಲೆ ಆರೋಪದ ಮೇಲೆ ಶಿಕ್ಷೆ ಅನುಭವಿಸುತ್ತಿದ್ದ ಧರ್ಮೇಂದ್ರ ಸಿಂಗ್ ಎಂಬುವವರನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಧರ್ಮೇಂದ್ರ ಸಿಂಗ್ 2007ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಸತ್ನಾ ಜೈಲಿನಲ್ಲಿದ್ದರು. ಅದೇ ಜೈಲಿನಲ್ಲಿ ವಾರಂಟ್ ವಿಭಾಗದ ಉಸ್ತುವಾರಿಯಾಗಿ ಫಿರೋಜಾ ಖಾತೂನ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಧರ್ಮೇಂದ್ರ ಕೂಡ ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದು, ಕಾಲಕ್ರಮೇಣ ಅದು ಪ್ರೀತಿಯಾಗಿ ಬದಲಾಗಿತ್ತು.
ಸುಮಾರು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಧರ್ಮೇಂದ್ರ ಸಿಂಗ್, ತಮ್ಮ ಉತ್ತಮ ನಡತೆಯ ಆಧಾರದ ಮೇಲೆ ನಾಲ್ಕು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. ಹೊರಬಂದ ನಂತರವೂ ಇವರ ಪ್ರೇಮ ಸಂಬಂಧ ಮುಂದುವರಿದಿದ್ದು ಅಂತಿಮವಾಗಿ ಇಬ್ಬರೂ ವಿವಾಹವಾಗಲು ನಿರ್ಧರಿಸಿದರು, ಆದರೆ, ಇವರ ಮದುವೆಗೆ ಫಿರೋಜಾ ಅವರ ಕುಟುಂಬದಿಂದ ತೀವ್ರ ವಿರೋಧವಿತ್ತು. ಅಲ್ಲದೆ ತಮ್ಮ ಮಗಳನ್ನು ಸ್ವಜಾತಿಯವರೊಂದಿಗೆ ವಿವಾಹ ಮಾಡಿಕೊಡಲು ಅವರು ಯೋಜಿಸಿದ್ದರು.
ಹಿಂದೂ ಸಂಪ್ರದಾಯದಂತೆ ವಿವಾಹ:
ಕುಟುಂಬದ ವಿರೋಧದ ನಡುವೆಯೂ, ಫಿರೋಜಾ ಅವರು ಧರ್ಮೇಂದ್ರ ಅವರೊಂದಿಗೆ ಜೀವನ ನಡೆಸಲು ನಿರ್ಧರಿಸಿದರು. ಅದರಂತೆ ಮೇ 5 ರಂದು ಛತ್ತರ್‌ಪುರದಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಇದು ಅಂತರಧರ್ಮೀಯ ವಿವಾಹವಾಗಿದ್ದರಿಂದ ಫಿರೋಜಾ ಅವರ ಕುಟುಂಬದವರು ಮದುವೆಗೆ ಬರಲು ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ (VHP) ಜಿಲ್ಲಾ ಉಪಾಧ್ಯಕ್ಷ ರಾಜಬಹದ್ದೂರ್ ಮಿಶ್ರಾ ಮತ್ತು ಅವರ ಪತ್ನಿ ಮುಂದೆ ಬಂದು ಫಿರೋಜಾ ಅವರಿಗೆ 'ಕನ್ಯಾದಾನ' ನೆರವೇರಿಸಿದರು.