ತಿರುವನಂತಪುರಂ: ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಎಡ ಪ್ರಜಾಸತ್ತಾತ್ಮಕ ರಂಗದ (LDF) ಆಡಳಿತವನ್ನು ಅಂತ್ಯಗೊಳಿಸಿರುವ ಮತದಾರರು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಒಟ್ಟು 140 ಸ್ಥಾನಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದುಕೊಂಡಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಕೇವಲ 35 ಸ್ಥಾನಗಳಿಗೆ ಕುಸಿದಿದೆ. ಈ ಸೋಲಿನೊಂದಿಗೆ, ಕಳೆದ ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಎಡಪಕ್ಷಗಳು ಭಾರತದ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಂತಾಗಿದೆ.
ಪಿಣರಾಯಿ ವಿಜಯನ್ ಸಂಪುಟದ 13 ಸಚಿವರು ಪರಾಭವಗೊಂಡಿದ್ದಾರೆ. ವೀಣಾ ಜಾರ್ಜ್, ಎಂ.ಬಿ. ರಾಜೇಶ ಮತ್ತು ವಿ. ಶಿವನ್ ಕುಟ್ಟಿ ಅವರಂತಹ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಕೇವಲ ಏಳು ಸಚಿವರು ಮಾತ್ರ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2021 ರಲ್ಲಿ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಧರ್ಮಡಮ್ ಕ್ಷೇತ್ರದಿಂದ 19,247 ಅಂತರದಿಂದ ಜಯಗಳಿಸಿದರು. ಆರಂಭಿಕ ಐದು ಸುತ್ತುಗಳಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ ಹಿಂದುಳಿದಿದ್ದರು.
ಬಿಜೆಪಿ ಖಾತೆ ಆರಂಭ
ಕೇರಳ ವಿಧಾನಸಭೆಯಲ್ಲಿ ಬಿಜೆಪಿ ಈ ಬಾರಿ 3 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ನೇಮಮ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಅಲ್ಲದೆ, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಕಜಕುಟ್ಟಂ ಕ್ಷೇತ್ರದಲ್ಲಿ ಹಾಗೂ ಬಿ.ಬಿ. ಗೋಪಕುಮಾರ ಚಾತನೂರು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ.
