ಬೆಳಗಾವಿ: ಜನ್ಮ ನೀಡಿ, ಸಾಕಿ ಸಲುಹಿ, ಬದುಕಿನ ಕೊನೆಯ ಉಸಿರಿನವರೆಗೂ ಮಗನ ನೆರಳೇ ಆಶ್ರಯವೆಂದು ನಂಬಿದ್ದ ವೃದ್ಧ ತಾಯಿಯನ್ನೇ ಮಗನೊಬ್ಬ ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.
ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆ: ರಾಮದುರ್ಗ ತಾಲ್ಲೂಕಿನ ಸಾಲೊಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ಎಂಬ ವೃದ್ಧೆಯನ್ನು ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಮುನವಳ್ಳಿಯ ನವೀಲುತೀರ್ಥ ಡ್ಯಾಮ್ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಮಗ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆ ಬೆಳಗ್ಗೆ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಂಡವರ ಮುಂದೆ ಕೈಮುಗಿದು ನೆರವು ಬೇಡಿದ ದೃಶ್ಯ ಎಲ್ಲರ ಮನ ಕಲುಕಿದೆ.
ಸ್ಥಳೀಯರು ವೃದ್ಧೆಯ ಸ್ಥಿತಿ ಕಂಡು ತಕ್ಷಣ ಆರೈಕೆ ಮಾಡಿದ್ದಾರೆ. ತಾನು ಸಾಕಿ ಬೆಳೆಸಿದ ಮಗನೇ ತಮಗೆ ಇಂಥ ಸ್ಥಿತಿ ತಂದಿದ್ದಾನೆ ಎಂದು ಕಮಲಮ್ಮ ಕಣ್ಣೀರಿಡುತ್ತ ಹೇಳಿಕೊಂಡಿರುವುದು ಮಾನವೀಯ ಮನಸ್ಸುಗಳನ್ನು ನಡುಗಿಸಿದೆ. ಮಗ ಸಂತೋಷ ಎಂಬಾತ ಸಂಕೇಶ್ವರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ವೃದ್ಧೆ ನೀಡಿದ್ದಾರೆ.
ಇದು ಕೇವಲ ಒಂದು ಕುಟುಂಬದ ನೋವಲ್ಲ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾನವೀಯತೆ ಮರೆತ ಪುತ್ರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಮುನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತಕ್ಷಣ ಪ್ರಕರಣದ ಗಂಭೀರತೆ ಅರಿತು ತನಿಖೆ ನಡೆಸಿ, ವೃದ್ಧ ತಾಯಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ತಾಯಿ ಭಾರವಲ್ಲ – ತಾಯಿ ಬದುಕಿನ ಬೇರು: ವೃದ್ಧ ತಾಯಿಯನ್ನು ಕತ್ತಲಿನಲ್ಲಿ ಬಿಟ್ಟುಹೋಗುವುದು ಕೇವಲ ಅಪರಾಧವಲ್ಲ; ಅದು ಮನುಷ್ಯತ್ವವನ್ನೇ ಪ್ರಶ್ನಿಸುವ ಕ್ರೌರ್ಯ. ಸಮಾಜ ಮೌನವಾಗಿದ್ದರೆ ಇಂತಹ ಘಟನೆಗಳು ಇನ್ನಷ್ಟು ಹೆಚ್ಚಾಗುವ ಅಪಾಯವಿದೆ.
