ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗುವ ಸಮಯ ಹತ್ತಿರವಾಗಿದೆ. ಸಿದ್ದರಾಮಯ್ಯ ಅವರ ಪಾಲಿಗೆ ಗುರುವಾರ ಮುಖ್ಯಮಂತ್ರಿ ಹುದ್ದೆ ಕೊನೆಯ ದಿನವಾಗುವ ಸುಳಿವು ದೊರೆತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳ ಎದುರು ಅವರು ತಾವು ಹುದ್ದೆಯಿಂದ ನಿರ್ಗಮಿಸುವುದಾಗಿ ತಿಳಿಸಿದ್ದು ಕೆಲವೇ ಗಂಟೆಗಳಲ್ಲಿ ಅವರು ಸ್ಥಾನ ತ್ಯಜಿಸುವುದು ಖಚಿತವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಗುರುವಾರ ಕಾವೇರಿ ನಿವಾಸದಲ್ಲಿ ಆಯೋಜಿಸಿದ್ದ ಉಪಹಾರ ಕೂಟದ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವರು, ಶಾಸಕರ ಸಮ್ಮುಖದಲ್ಲಿ ಘೋಷಿಸಿದ್ದಾರೆಂದು ಮಾಧ್ಯಮಗಳ ವರದಿ ತಿಳಿಸಿದೆ.
ನವದೆಹಲಿಯ ಇಂದಿರಾ ಭವನದಲ್ಲಿ ನಡೆದ ಪಕ್ಷದ ಹೈಕಮಾಂಡ್ ಸಭೆಯಲ್ಲಿ ನೀಡಿರುವ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯನವರು ಸಚಿವರಿಗೆ ಮನವರಿಕೆ ಮಾಡಿದ್ದಾರೆನ್ನಲಾಗಿದೆ.
ಕಳೆದ ಮೂರು ವರ್ಷಗಳ ಕಾಲ ನನಗೆ ಸಹಕಾರ ನೀಡಿದ್ದೀರಿ. ನಮ್ಮ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ಮುಂದಿನ ನಿರ್ಣಯಗಳನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದು, ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.
ಸಿದ್ದರಾಮಯ್ಯನವರ ರಾಜೀನಾಮೆ ಘೋಷಣೆ ಮೂಲಕ ಕಳೆದ ಎರಡು ದಿನಗಳಿಂದ ರಾಜ್ಯರಾಜಕಾರಣದಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೇರುವ ಹಾದಿ ಸುಗಮವಾದಂತಾಗಿದೆ.
ಸಿಎಂ ಕಾಲಿಗೆ ಬಿದ್ದ ಡಿಕೆಶಿ:
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಆಲಂಗಿಸಿ, ನಂತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಿದ್ದರಾಮಯ್ಯನವರು ಅಭಿನಂದನೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
