ಬೆಂಗಳೂರು: ನಾಡಗೀತೆಯಲ್ಲಿ ಇರುವ 'ಪಾರಸಿಕ ಜೈನ ರುದ್ಯಾನ' ಸಾಲನ್ನು ಪರಿಷ್ಕರಿಸಿ 'ಬೌದ್ಧ' ಪದವನ್ನೂ ಒಳಗೊಂಡಂತೆ 'ಪಾರಸಿಕ ಜೈನ ಬೌದ್ಧರುದ್ಯಾನ' ಎಂದು ಮಾರ್ಪಾಡು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.
ರಾಷ್ಟ್ರಕವಿ ಕುವೆಂಪು ಅವರು 1924 ರಲ್ಲಿ ಬರೆದಿದ್ದ ನಾಡಗೀತೆಯ ಮೊದಲ ಕರಡು ಪ್ರತಿಯಲ್ಲಿ 'ಬೌದ್ಧರುದ್ಯಾನ' ಎಂಬ ಪದವಿತ್ತು. ಆದರೆ, 1930 ರಲ್ಲಿ ಅವರ 'ಕೊಳಲು' ಕವನ ಸಂಕಲನದಲ್ಲಿ ಈ ಹಾಡು ಪ್ರಕಟವಾದಾಗ ಅದು 'ಜೈನರುದ್ಯಾನ' ಎಂದಾಗಿತ್ತು. ಬೌದ್ಧ ಧರ್ಮಕ್ಕೆ ಇರುವ ಐತಿಹಾಸಿಕ ಮಹತ್ವ ವನ್ನು ಪರಿಗಣಿಸಿ, ಮತ್ತೆ ಬೌದ್ಧ ಪದ ಸೇರಿಸಬೇಕು ಎಂದು ಕೋರಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು 2025 ರ ನವೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದರು.
ಅವರ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 8 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದು, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕುವೆಂಪು ಅವರ ಅಳಿಯ ಡಾ.ಕೆ. ಚಿದಾನಂದ, ಎಸ್.ಜಿ.
ದೇವಿ, ಸಿದ್ದರಾಮಯ್ಯ, ದ್ವಾರಕಾನಾಥ ಚೊಕ್ಕ, ಮೂಡ್ನಾಕೂಡು ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸಮಿತಿಯ ಸದಸ್ಯರಾಗಿದ್ದರು.
ಬರಗೂರು ಹೊರತುಪಡಿಸಿ ಉಳಿದೆಲ್ಲರೂ ಸಭೆ ಸೇರಿ ಈ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಈ ಪದ ಸೇರ್ಪಡೆ ಕುವೆಂಪು ಅವರ ಆಶಯಗಳಿಗೆ ವಿರುದ್ಧವಾಗಿಲ್ಲ.' ಹಾಡಿನ ಉದ್ದ ಹೆಚ್ಚಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ ಎಂದರು.