ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ವಿರುದ್ಧ ಬಂಡೆದ್ದಿರುವ ಸಂಸದ ರಾಘವ್ ಚಡ್ಡಾ, ಶುಕ್ರವಾರ ಎಎಪಿಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರುವುದಾಗಿ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಡ್ಡಾ, ಎಎಪಿಯ ರಾಜ್ಯಸಭಾ ಸಂಸದರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
“ರಾಜ್ಯಸಭೆಯಲ್ಲಿರುವ ಎಎಪಿಯ ಮೂರನೇ ಎರಡರಷ್ಟು ಸದಸ್ಯರು ಭಾರತದ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿಯೇ ಬಿಜೆಪಿಯೊಂದಿಗೆ ನಮ್ಮನ್ನು ನಾವು ವಿಲೀನಗೊಳಿಸಿಕೊಳ್ಳಲು ನಿರ್ಧರಿಸಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.
ಸಂಸದರಾದ ಸಂದೀಪ ಪಾಠಕ್ ಮತ್ತು ಅಶೋಕ ಮಿತ್ತಲ್ ಕೂಡ ತಾವು ಎಎಪಿಯಿಂದ ಹೊರಬಂದು ಬಿಜೆಪಿ ಸೇರುತ್ತಿರುವುದಾಗಿ ಘೋಷಿಸಿದರು.
ಬಿಜೆಪಿಯತ್ತ ಮುಖ ಮಾಡಿದ ಪ್ರಮುಖರು..
ರಾಘವ ಚಡ್ಡಾ ಅವರು ತಮ್ಮೊಂದಿಗೆ ಇನ್ನೂ ಹಲವು ಪ್ರಮುಖ ನಾಯಕರು ಬಿಜೆಪಿ ಸೇರುತ್ತಿರುವುದನ್ನು ಬಹಿರಂಗಪಡಿಸಿದರು. ರಾಜ್ಯಸಭಾ ಸದಸ್ಯರಾದ ಸ್ವಾತಿ ಮಲಿವಾಲ್ (ಅತೃಪ್ತ ನಾಯಕಿ), ಮಾಜಿ ಕ್ರಿಕೆಟಿಗ ಹಾಗೂ ರಾಜ್ಯ ಸಭಾ ಸದಸ್ಯ, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ ಹಾಗೂ ವಿಕ್ರಮ ಸಾಹ್ನಿ ಸಹ ಬಿಜೆಪಿ ಸೇರುತ್ತಿದ್ದಾರೆ.
ಈ ಬೆಳವಣಿಗೆಯಿಂದಾಗಿ ರಾಜ್ಯಸಭೆಯಲ್ಲಿ ಎಎಪಿ ಬಲ ಕುಸಿದಿದ್ದು, ಇನ್ನು ಮುಂದೆ ಕೇವಲ ಸಂಜಯ ಸಿಂಗ್, ಎನ್.ಡಿ. ಗುಪ್ತಾ ಮತ್ತು ಬಲ್ಬೀರ್ ಸಿಂಗ್ ಸಿಚೆವಾಲ್ ಮಾತ್ರ ಪಕ್ಷದ ರಾಜ್ಯಸಭಾ ಸದಸ್ಯರಾಗಿ ಉಳಿಯಲಿದ್ದಾರೆ.
“ತಪ್ಪು ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ ನಾನು”
ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಚಡ್ಡಾ, ತಾವು ರಕ್ತ ಮತ್ತು ಬೆವರಿನಿಂದ ಕಟ್ಟಿದ ಪಕ್ಷವು ಮೂಲ ತತ್ವಗಳಿಂದ ದೂರ ಸರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. “ನನ್ನ ಯೌವನದ 15 ವರ್ಷಗಳನ್ನು ಈ ಪಕ್ಷಕ್ಕೆ ನೀಡಿದ್ದೇನೆ. ಆದರೆ ಈಗ ಈ ಪಕ್ಷ ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಾನು ‘ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ’ ಎಂಬ ಭಾವನೆ ನನ್ನಲ್ಲಿತ್ತು,” ಎಂದರು.
ಮೋದಿಯವರ ನಾಯಕತ್ವಕ್ಕೆ ಮೆಚ್ಚುಗೆ..
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಘವ ಚಡ್ಡಾ ಅವರು, ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಲಿರುವುದಾಗಿ ತಿಳಿಸಿದರು.
ಭಯೋತ್ಪಾದನೆ ದಮನ ಮತ್ತು ಭಾರತದ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವಲ್ಲಿ ಮೋದಿ ಸರ್ಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಜನರು ಈ ನಾಯಕತ್ವವನ್ನು ಮೂರು ಬಾರಿ ಅನುಮೋದಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು.
ಸಂದೀಪ ಪಾಠಕ್ ಮತ್ತು ಅಶೋಕ ಮಿತ್ತಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಚಡ್ಡಾ ಅವರ ಪಕ್ಕದಲ್ಲಿ ನಿಂತು ಪಕ್ಷಾಂತರದ ಸಂಘಟಿತ ಸ್ವರೂಪವನ್ನು ಒತ್ತಿ ಹೇಳಿದರು.
ಪಕ್ಷಾಂತರದ ಪ್ರಮಾಣ ಗಮನಾರ್ಹವಾಗಿದ್ದರೂ, ಚಡ್ಡಾ ಅವರ ನಿರ್ಗಮನವನ್ನು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಒಂದು ಕಾಲದಲ್ಲಿ ಎಎಪಿಯ ಪ್ರಮುಖ ರಾಷ್ಟ್ರೀಯ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆಪ್ತರಾಗಿದ್ದ ರಾಘವ ಚಡ್ಡಾ ಇತ್ತೀಚಿನ ದಿನಗಳಲ್ಲಿ ನಾಯಕತ್ವದಿಂದ ದೂರವಾಗಿದ್ದರು.
ಪಂಜಾಬ್ ಜನತೆ ಕ್ಷಮಿಸಲ್ಲ’ : ಎಎಪಿ ಆಕ್ರೋಶ
ರಾಘವ್ ಚಡ್ಡಾ ಅವರ ಸುದ್ದಿಗೋಷ್ಠಿ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್, ಬಿಜೆಪಿ ಮತ್ತೊಮ್ಮೆ ‘ಆಪರೇಷನ್ ಕಮಲ’ ನಡೆಸುತ್ತಿದೆ ಎಂದು ಆರೋಪಿಸಿದರು.
“ಪಂಜಾಬ್ ಜನತೆ ಈ ಏಳು ಹೆಸರುಗಳನ್ನು ನೆನಪಿಟ್ಟುಕೊಳ್ಳಬೇಕು. ತಮಗೆ ದ್ರೋಹ ಮಾಡಿದವರನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ. ಪಕ್ಷವು ರಾಘವ ಚಡ್ಡಾರನ್ನು ಶಾಸಕ ಮತ್ತು ಸಂಸದನನ್ನಾಗಿ ಮಾಡಿತು. ಪಂಜಾಬ್‌ನ ಜನತೆ ಅವರಿಗೆ ಪ್ರೀತಿಯಿಂದ ರಾಜ್ಯಸಭೆಗೆ ಕಳುಹಿಸಿದ್ದರು. ಆದರೆ ಅವರು ಈಗ ಬಿಜೆಪಿಯ ಮಡಿಲು ಸೇರಿದ್ದಾರೆ,” ಎಂದು ಕಿಡಿಕಾರಿದರು.
