ಬೆಳಗಾವಿ : ಕಳೆದ ಮೂರು ತಿಂಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಾಸಿಕ ಸಭೆಗಳು ನಡೆದಿಲ್ಲ. ಮೇ 13 ರಂದು ನಡೆದ ಮಾಸಿಕ ಸಭೆಯೇ ಕೊನೆಯದಾಗಿದೆ. ಆ ನಂತರ ಸತತವಾಗಿ ಮೂರು ತಿಂಗಳ ಕಾಲ ಸಭೆಗಳು ನಡೆಯದೇ ಇದ್ದುದರಿಂದ ನೂರಾರು ಮಹತ್ವದ ವಿಷಯಗಳು ಮಂಜೂರಾಗದೆ ಬಾಕಿ ಉಳಿದಿವೆ. ರಾಜ್ಯ ಸರಕಾರದಿಂದ ಅನುದಾನ ಬಂದಿಲ್ಲವೆಂದು ಹೇಳುತ್ತಿರುವ ಕೆಲವು ನಾಯಕರು ಮಾಸಿಕ ಸಭೆಗಳನ್ನು ನಡೆಸದೇ ರಾಜ್ಯ ಸರಕಾರದ ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ. ಬೆಳಗಾವಿಯ ಅಭಿವೃದ್ಧಿಗೆ ಅವಶ್ಯಕವಿರುವ ಅನುದಾನವನ್ನು ಪಡೆಯಲು ಪಾಲಿಕೆಯಲ್ಲಿ ಆಡಳಿತದಲ್ಲಿರುವ ಪಕ್ಷದ ನಾಯಕರಾಗಲಿ, ಮಹಾಪೌರ ಹಾಗೂ ಉಪಮಹಾಪೌರರಾಗಲಿ ರಾಜ್ಯ ಸರಕಾರದ ಜೊತೆಗೆ ಸಮನ್ವಯ ಸಾಧಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕನ್ನಡ ಸಂಘಟನೆಗಳು ಆರೋಪಿಸಿವೆ.
ಬೆಳಗಾವಿಗೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಸತ್ಸಂಪ್ರದಾಯಕ್ಕೆ ಪ್ರಥಮ ಪ್ರಜೆಯಾದ ಮಹಾಪೌರರು ತಿಲಾಂಜಲಿ ನೀಡಿದ್ದಾರೆ. ಆದರೆ ವಿಶೇಷ ಅನುದಾನವನ್ನು ಕೇವಲ ಮಾಧ್ಯಮದ ಮೂಲಕ ಕೇಳುವ ಆಡಳಿತ ಪಕ್ಷದ ನಾಯಕರು ಸರಕಾರದ ಜೊತೆ ಚರ್ಚಿಸುತ್ತಿಲ್ಲ. ಇದರಿಂದಾಗಿ ಬೆಳಗಾವಿ ಮಹಾನಗರದ 58 ವಾರ್ಡಗಳಿಗೆ ಸಿಗಬೇಕಾದ ನಿಧಿಯು ಸಿಗುತ್ತಿಲ್ಲ.
ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿ ಬೆಳಗಾವಿಯ 22 ಸಮಾನ ಮನಸ್ಕ ಕನ್ನಡ ಸಂಘಟನೆಗಳು ಕಳೆದ 4 ತಿಂಗಳಿಂದ ಹೋರಾಟ ನಡೆಸುತ್ತ ಬಂದಿವೆ. ಕರ್ನಾಟಕದ ಪರವಾಗಿ ನಾಡು, ನುಡಿ ಹಾಗೂ ಗಡಿಯ ಹಿತಾಸಕ್ತಿಗಾಗಿ ಗೊತ್ತುವಳಿ ಅಂಗೀಕರಿಸಲು ಹಿಂದೇಟು ಹಾಕುತ್ತಿರುವ ಪಾಲಿಕೆಗೆ ಕರ್ನಾಟಕ ಸರಕಾರದ ಅನುದಾನ ಬೇಕು. ಕನ್ನಡಿಗರ ತೆರಿಗೆ ಹಣ ಬೇಕು. ಆದರೆ ಕರ್ನಾಟಕದ ಪರವಾದ ಗಟ್ಟಿಯಾದ ನಿಲುವು ಬೇಡ. ಇಂತಹ ನಾಡದ್ರೋಹಿ ಪಾಲಿಕೆಗೆ ರಾಜ್ಯ ಸರಕಾರ ಯಾವುದೇ ರೀತಿಯ ಅನುದಾನ ನೀಡಬಾರದೆಂದು ಹಾಗೂ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಕನ್ನಡ ಸಂಘಟನೆಗಳು ಸರಕಾರವನ್ನು ಅನೇಕ ಬಾರಿ ಒತ್ತಾಯಿಸಿವೆ.
ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿರುವುದರಿಂದ ಪಾಲಿಕೆಯನ್ನು ಈ ಕೂಡಲೇ ಸೂಪರ್ ಸೀಡ್ ಮಾಡಬೇಕೆಂದು ಕೋರುವುದಾಗಿ ಕನ್ನಡ ಸಂಘಟನೆಗಳ ಪರವಾಗಿ ಅಶೋಕ ಚಂದರಗಿ ತಿಳಿಸಿದ್ದಾರೆ.