ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆ ಒಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚನೆಯನ್ನು ತಕ್ಷಣದಿಂದಲೇ ಪಾಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.
ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಶಿವಕುಮಾರ್ ಅವರು, 'ಎಲ್ಲರೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು' ಎಂದು ತಾಕೀತು ಮಾಡಿದ್ದರು.
ಮುಖ್ಯ ಕಾರ್ಯದರ್ಶಿಯು ಈ ಸಂಬಂಧ ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
'ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ ಕರ್ತವ್ಯ ಆ್ಯಪ್‌ನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ವಿವರಗಳನ್ನು ನೋಂದಾಯಿಸಲಾಗಿದೆ. ಆದರೆ, ಹಲವರು ಈ ಆ್ಯಪ್ ಅನ್ನು ಬಳಕೆ ಮಾಡುತ್ತಿಲ್ಲ. ಇನ್ನು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯು ಕಚೇರಿಗೆ ಬಂದು ಬೆಳಿಗ್ಗೆ 10ರ ಒಳಗೆ ಆ್ಯಪ್‌ನಲ್ಲಿ 'ಚೆಕ್ ಇನ್' ಮಾಡಬೇಕು. ಕಚೇರಿಯಿಂದ ಹೊರಗೆ ಹೋಗುವಾಗ 'ಚೆಕ್ ಔಟ್' ಮಾಡಬೇಕು'
'ಬೆಳಿಗ್ಗೆ 10ರ ಒಳಗೆ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಯ ಕಚೇರಿವಾರು ಮತ್ತು ಜಿಲ್ಲಾವಾರು ವರದಿಯು ಸ್ವಯಂಚಾಲಿತವಾಗಿ ಇಲಾಖಾ ಮುಖ್ಯಸ್ಥರಿಗೆ ರವಾನೆಯಾಗಲಿದೆ. ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ಡ್ಯಾಶ್‌ಬೋರ್ಡ್‌ನಲ್ಲಿ ವಿವರ ಪರಿಶೀಲಿಸಿ, ಸಮಯಕ್ಕೆ ಚೆಕ್ ಇನ್ ಮಾಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬೇಕು' ಎಂದು ತಿಳಿಸಿದ್ದಾರೆ.
'ಕಚೇರಿ ಕರ್ತವ್ಯದ ಮೇಲೆ ಪ್ರವಾಸದಲ್ಲಿದ್ದರೆ, ಕರ್ತವ್ಯ ಆ್ಯಪ್‌ನಲ್ಲಿ ಒಒಡಿ ಆಯ್ಕೆ ಮಾಡಿ ಹಾಜರಾತಿ ದಾಖಲಿಸಬೇಕು. ಮೇಲಧಿಕಾರಿಯು ಅದನ್ನು ದೃಢಪಡಿಸಬೇಕು. ಈ ಎಲ್ಲ ಸೂಚನೆಗಳನ್ನು ಅತ್ಯಂತ ತುರ್ತು ಮತ್ತು ಕಡ್ಡಾಯವೆಂದು ತಕ್ಷಣವೇ ಜಾರಿಗೆ ತರಬೇಕು' ಎಂದು ಸೂಚಿಸಿದ್ದಾರೆ.
