ಬೆಳಗಾವಿ: ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಬೆಳಗಾವಿಯಲ್ಲಿ 4,600ಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಜಿಲ್ಲಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದರೆ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮೊನ್ನೆ ಮಧ್ಯರಾತ್ರಿ ಎರಡು ಗಂಟೆವರೆಗೂ ದಾಳಿ ನಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮೇ 15ರ ಸಂಜೆ ವೇಳೆಗೆ ಬೆಳಗಾವಿ ಎಸಿ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದೆ. 45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ ಆಗಿದ್ದು, RBI ನಿಯಮಗಳನ್ನ ಗಾಳಿಗೆ ತೂರಿ ಕೋಟ್ಯಾಂತರ ರುಪಾಯಿ ಹೂಡಿಕೆ ಮಾಡಿದ ಆರೋಪವಿದೆ. ಡಿಸಿ ಮೊಹಮ್ಮದ್ ರೋಷನ್ ಆದೇಶ ಮೇರೆಗೆ ಈ ದಾಳಿ ನಡೆದಿತ್ತು.ಕಂದಾಯ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ಬ್ಯಾಂಕ್ ಅಕೌಂಟ್, ಎರಡು ಕಚೇರಿ, ಒಂದು ಅಪಾರ್ಟ್ಮೆಂಟ್ ನಿವಾಸ, ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಇದೀಗ 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಬೆಳಗಾವಿ ಎಸಿ ಶ್ರವಣಕುಮಾರ ಇಂದೇ ಡಿಸಿಗೆ ವರದಿ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ ಎಂಬ ಅವರ ಮಾತು ತಲ್ಲಣ ಸೃಷ್ಟಿಸಿತ್ತು.
ಹುಬ್ಬಳ್ಳಿಯಿಂದ ಬಂದು ಬದುಕು ಕಟ್ಟಿಕೊಂಡಿದ್ದ ಶಿವಾನಂದ...
ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಿವಾನಂದ ನೀಲಣ್ಣವರ ಬೆಳೆದ ಪರಿ ಎಂಥವರನ್ನು ಹುಬ್ಬೇರಿಸುವಂತಿದೆ.
ಹುಬ್ಬಳ್ಳಿ ಬಳಿಯಿರುವ ಉಣಕಲ್ ಶಿವಾನಂದ ನೀಲಣ್ಣವರ ಅವರ ಮೂಲ ಊರು. ಇವರ ತಂದೆ ಭಾರತೀಯ ಸೇನೆಯಲ್ಲಿದ್ದರು. ನಿವೃತ್ತಿಯಾದ ನಂತರ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನಿಧನರಾದರು. ಆ ನೌಕರಿ ಶಿವಾನಂದ ಅವರ ಸಹೋದರನಿಗೆ ಸಿಕ್ಕಿತ್ತು. ಅವರಿಗೆ ಬೆಳಗಾವಿಗೆ ವರ್ಗವಣೆಯಾದ ನಂತರ ಇಡೀ ಕುಟುಂಬ ಬೆಳಗಾವಿಗೆ ಬಂದು ನೆಲೆಸಿತ್ತು. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಶಿವಾನಂದ ನೀಲಣ್ಣವರ, ಆರಂಭದಲ್ಲಿ ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ
ಕೆಲಸ ಮಾಡಿದ್ದಾರೆ. 2004ರಿಂದ 2006ರವೆಗೆ ಆಟೋದಲ್ಲಿ ಫ್ರಿಜ್ ಇಟ್ಟುಕೊಂಡು ಐಸ್ ಕ್ರೀಮ್ ಮಾರಿದ್ದರು. ಅದಕ್ಕಾಗಿಯೇ ಐಸ್ ಕ್ರೀಮ್ ಫ್ಯಾಕ್ಟರಿ ಹಾಕಿದ್ದರು. 2012ರಲ್ಲಿ ಷೇರು ಪೇಟೆಯಲ್ಲಿ ಹೂಡಿಕೆ ಆರಂಭಿಸಿದ್ದರು. ಶಿವಾನಂದ ನೀಲಣ್ಣವರ ಅವರಿಗೆ ಅದು ಕೈ ಹಿಡಿಯಲೇ ಇಲ್ಲ. ಆಗ ಅಕ್ಯೂಮೆನ್ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದರು. ಅದರ ಮೂಲಕ ಜನರಿಂದ ಹಣ ಹೂಡಿಕೆಗೆ ಮುಂದಾದರು. ಈ ಆ್ಯಪ್ ಮೂಲಕ ನೂರಾರು ಕೋಟಿ ಹೂಡಿಕೆಯಾಗಿದೆ. ಶಿವಂ ಅಸೊಸಿಯೇಟ್ಸ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದ್ದರು. ಇದರಿಂದಲೇ ಅವರು ಪ್ರಸಿದ್ದಿಗೆ ಬಂದಿದ್ದರು. ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿಯನ್ನು ಸೃಷ್ಟಿ ಮಾಡಿದ್ದವು. ಅದರಲ್ಲಿಯೂ ಅವರು ಇತ್ತೀಚಿಗೆ ಕಡೂರಿನಲ್ಲಿ ಮಾಡಿದ್ದ ಭಾಷಣ ಬಹುದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿತ್ತು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಮತಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮುಂದೆ ನಾನು ರಾಜ್ಯದ ಮುಖ್ಯಮಂತ್ರಿಯಾಗುವೆ ಎಂಬ ಮಾತು ಬಾರಿ ವೈರಲಾಗಿತ್ತು.
