ಚಿಕ್ಕಮಗಳೂರು: ಆಟವಾಡುತ್ತಿದ್ದಾಗ ಏಣಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ಬಾಲಕಿಯನ್ನು 8ನೇ ತರಗತಿ ಓದುತ್ತಿದ್ದ ಸಪ್ತಮಿ (14) ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಗೆ ಬಾಲಕಿ ಸಪ್ತಮಿ ಕಲ್ಲೊಳ್ಳಿ ಗ್ರಾಮದ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಮನೆಯ ಅಟ್ಟದ ಮೇಲೆ ಆಟವಾಡುತ್ತಿದ್ದ ಬಾಲಕಿ ಕೆಳಗೆ ಇಳಿಯಲು ಯತ್ನಿಸಿದ್ದಾಳೆ. ಆಗ ಏಣಿಗೆ ಕಟ್ಟಲಾಗಿದ್ದ ಸೀರೆಯ ಹಗ್ಗ ಆಕಸ್ಮಿಕವಾಗಿ ಆಕೆಯ ಕುತ್ತಿಗೆಗೆ ಬಿಗಿದುಕೊಂಡಿದೆ.ಘಟನೆ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
