ನವದೆಹಲಿ : ಕೊನೆಗೂ
ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಿದ್ದು ತಮ್ಮ ಬಣಕ್ಕೆ ಮೂರು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಲವಾದ ಬೇಡಿಕೆ ಇಟ್ಟಿದೆ. ಆದರೆ ಹೈಕಮಾಂಡ್ ಮೂವರ ಬದಲಿಗೆ ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ತರಬಹುದು.
ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಿರುವ ಹೈಕಮಾಂಡ್, ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ನಿರ್ವಹಣೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ನಿರ್ಧರಿಸಲು ಸಿದ್ದರಾಮಯ್ಯ ಸಮಯ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ನಡುವೆ ಗುರುವಾರ ಸಿದ್ದರಾಮಯ್ಯ ಸಚಿವರನ್ನು ಉಪಾಹಾರ ಕೂಟಕ್ಕೆ ಆಹ್ವಾನಿಸಿದ್ದು, ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಆಪ್ತರಾದ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎನ್ನಲಾಗುತ್ತಿದೆ. ಸತೀಶ ಜಾರಕಿಹೊಳಿ, ಪರಮೇಶ್ವರ ಮತ್ತು ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಇದರಲ್ಲಿ ಸತೀಶ ಜಾರಕಿಹೊಳಿ ಉಪಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುತ್ತಾರೋ ಅಥವಾ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
ಈ ನಡುವೆ ದೇಶದಲ್ಲಿರುವ ಏಕೈಕ ಒಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದು, ಸೂಕ್ಷ್ಮವಾಗಿ ಅಧಿಕಾರ ಹಸ್ತಾಂತರ ನಿರ್ವಹಣೆಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಗಾದಿಯಿಂದ ಕೆಳಗಿಳಿಯುವ ಸಿದ್ದರಾಮಯ್ಯ ನಿರ್ಧಾರದ ಬಗ್ಗೆ ಆಪ್ತ ವಲಯದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
