ಬೆಂಗಳೂರು: ಐಎಎಸ್, ಕೆಎಎಸ್ ಶ್ರೇಣಿಯ ಅಧಿಕಾರಿಗಳೂ ಸೇರಿದಂತೆ ಸರ್ಕಾರಿ ನೌಕರರು ಇನ್ನು ಮುಂದೆ ನೆಪ ಹೇಳಿ ಕಚೇರಿಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಕರ್ತವ್ಯದ ಸ್ಥಳದಲ್ಲಿ ಇದ್ದಾರೋ, ಇಲ್ಲವೋ ಎನ್ನವ ಪ್ರತಿ ದಿನದ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದೆ.
ರಾಜ್ಯ ಸರ್ಕಾರಿ ನೌಕರರ ಚಲನವಲನ ದಾಖಲಿಸುವ ಜಿಯೊ ಟ್ಯಾಗ್, ಮುಖಚರ್ಯೆ ಒಳಗೊಂಡ ಇ–ಹಾಜರಾತಿಯನ್ನು (ಕರ್ತವ್ಯ) ಬಾಕಿ ಉಳಿದ ಎಲ್ಲ ಇಲಾಖೆ, ನಿಗಮ–ಮಂಡಳಿಗಳೂ ತಕ್ಷಣವೇ ಕಡ್ಡಾಯವಾಗಿ ಅಳವಡಿಸಿಕೊಂಡು ನಿತ್ಯದ ಹಾಜರಾತಿ ವಿವರ ಒದಗಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ಸಭೆಯಲ್ಲಿ, ‘ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಕಚೇರಿಗಳಲ್ಲಿ ಬೆಳಿಗ್ಗೆ ಹಾಜರಿರಬೇಕು. ಶೇಕಡ 100 ಹಾಜರಾತಿ ಇರಬೇಕು. ಹೊರಗೆ ಹೋಗುವ ಅಗತ್ಯವಿದ್ದರೆ ಆಯಾ ದಿನದ ಪ್ರವಾಸದ ವಿವರಗಳನ್ನು ಸಾರ್ಜನಿಕವಾಗಿ ಪ್ರಕಟಿಸಬೇಕು’ ಎಂದು ತಾಕೀತು ಮಾಡಿದ್ದರು. ಮೂರು ದಿನಗಳಲ್ಲೇ ಮೊಬೈಲ್ ಆ್ಯಪ್ ಆಧಾರಿತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು (ಕಾಮ್ಸ್) ತ್ವರಿತವಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಇದುವರೆಗೂ ಇದ್ದ ಬಯೊಮೆಟ್ರಿಕ್ ವ್ಯವಸ್ಥೆಯಲ್ಲಿ ನೌಕರರು ಕಚೇರಿಯಲ್ಲಿ ಇದ್ದಾರೋ, ಇಲ್ಲವೋ ಎಂಬ ಮಾಹಿತಿ ಸಿಗುತ್ತಿರಲಿಲ್ಲ. ಈ ದೋಷವನ್ನು ನಿವಾರಿಸಲು, ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು, ಸಾರ್ವಜನಿಕರ ಕೆಲಸಗಳಿಗೆ ವೇಗ ನೀಡಲು ಸಹಕಾರಿಯಾಗುವ ಸ್ವದೇಶಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಒಳಗೊಂಡ ನೂತನ ಕ್ರಮವನ್ನು ‘ಕರ್ತವ್ಯ’ ಕ್ರಾಂತಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಣ್ಣಿಸಿದ್ದಾರೆ.
‘ಕಾಮ್ಸ್’ ಹೇಗೆ ಕೆಲಸ ಮಾಡುತ್ತದೆ?
ಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ ‘ಕರ್ತವ್ಯ (ಕಾಮ್ಸ್)’ ಸಾಫ್ಟ್‌ವೇರ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ ಇ–ಆಡಳಿತ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆ ವಿಭಾಗ ಜಂಟಿಯಾಗಿ ಸಿದ್ಧಪಡಿಸಿವೆ. ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ವಾರದ ಹಿಂದೆ 2.46 ಲಕ್ಷ ಇದ್ದ ನೋಂದಾಯಿತ ಉದ್ಯೋಗಿಗಳ ಸಂಖ್ಯೆ ಈಗ 3.01 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ವಾರದಲ್ಲಿ ಶೇ 25ರಷ್ಟು ಹೆಚ್ಚಳವಾಗಿದ್ದು ಸುಮಾರು 55000 ನೌಕರರು ಸೇರ್ಪಡೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ಅಂದರೆ 176055 ನೌಕರರಲ್ಲಿ 168252 ನೌಕರರು ನೋಂದಾಯಿಸಿಕೊಂಡಿದ್ದು 141800 ಮಂದಿ ಕಾಮ್ಸ್ ಬಳಸುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 66969 ಅಧಿಕಾರಿಗಳು ಮತ್ತು ಸಿಬ್ಬಂದಿ ನೋಂದಣಿ ಮಾಡಿಕೊಂಡಿದ್ದು 54400 ಮಂದಿ ಬಳಕೆ ಮಾಡುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಷ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಈಗಾಗಲೇ ಶೇ 90ರಷ್ಟು ಬಳಸುತ್ತಿವೆ ಎಂದು ಶಾಲಿನಿ ರಜನೀಶ್ ಮಾಹಿತಿ ನೀಡಿದ್ದಾರೆ.
ವೈಶಿಷ್ಟ್ಯಗಳು:
ಕೃತಕ ಬುದ್ಧಿಮತ್ತೆ ಆಧಾರಿತ ಮುಖಚರ್ಯೆ ಗುರುತಿಸುವಿಕೆ ವ್ಯವಸ್ಥೆ
ವಂಚನೆಯ ಹಾಜರಾತಿ ತಡೆಗೆ ಸ್ಥಳ ಗುರುತಿಸುವ ತಂತ್ರಜ್ಞಾನ
ಕಚೇರಿಯ ನಿಗದಿತ ಪರಿಧಿಯ ಹಾಜರಿಗೆ ಜಿಯೋಫೆನ್ಸಿಂಗ್ ಜಿಐಎಸ್ ತಂತ್ರಜ್ಞಾನ
ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜನೆ
ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್‌ಗಳ ಮೂಲಕ ಹಾಜರಾತಿ ರಜೆ ಒಒಡಿ ದಾಖಲಿಸುವ ಸೌಲಭ್ಯ
ಕಾಮ್ಸ್ ಆ್ಯಪ್ ಹಾಜರಾತಿ ಮೂಲಕ ಕಚೇರಿಗಳಲ್ಲಿ ಅಧಿಕಾರಿಗಳ ಭೌತಿಕ ಲಭ್ಯತೆ ವಿಶ್ವಾಸಾರ್ಹತೆ ಖಾತರಿಪಡಿಸಲಾಗುತ್ತಿದೆ. ನನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಕಡ್ಡಾಯ. ಇದು ದೇಶದಲ್ಲೇ ಮೊದಲ ನಾಗರಿಕ ಕೇಂದ್ರಿತ ಸುಧಾರಣೆ.
– ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ
ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ವ್ಯವಸ್ಥೆ ಕೆಲಸಕ್ಕೆ ವೇಗ ನೀಡಲಿದೆ. ಮುಖ್ಯಸ್ಥರೇ ಸರಿಯಾದ ಸಮಯಕ್ಕೆ ಹಾಜರಾಗುವುದು ಸಿಬ್ಬಂದಿಯ ಜವಾಬ್ದಾರಿ ಹೆಚ್ಚಿಸಲಿದೆ. ಹಾಗೆಯೇ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು.
– ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ