ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ, ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿದ್ದಾರೆ.
ಈ ಬೆಳವಣಿಗೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಂಗಳವಾರ ದೃಢಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ. ವೇಣುಗೋಪಾಲ, “ಟಿವಿಕೆ ಅಧ್ಯಕ್ಷ ವಿಜಯ ಅವರು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ನ ಬೆಂಬಲವನ್ನು ಅಧಿಕೃತವಾಗಿ ಕೇಳಿದ್ದಾರೆ. ತಮ್ಮ ರಾಜಕೀಯ ಪಯಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ‘ಪೆರುಂತಲೈವರ್’ ಕೆ. ಕಾಮರಾಜರ್ ಅವರ ಆಡಳಿತ ವೈಖರಿಯೇ ತಮಗೆ ಸ್ಫೂರ್ತಿ ಎಂದು ವಿಜಯ ತಿಳಿಸಿದ್ದಾರೆ ಎಂದರು.
ತಮಿಳುನಾಡಿನಲ್ಲಿ ಸಂವಿಧಾನವನ್ನು ರಕ್ಷಿಸಲು ಬದ್ಧವಾಗಿರುವ ಜಾತ್ಯತೀತ ಸರ್ಕಾರಕ್ಕೆ ಜನಾದೇಶವಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಅಥವಾ ಅದರ ಪ್ರಾಯೋಜಿತ ಶಕ್ತಿಗಳು ಯಾವುದೇ ರೀತಿಯಲ್ಲಿ ಸರ್ಕಾರ ನಡೆಸದಂತೆ ತಡೆಯುವುದು ಕಾಂಗ್ರೆಸ್‌ನ ಮುಖ್ಯ ಉದ್ದೇಶ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಜಾತ್ಯತೀತ ಸರ್ಕಾರಕ್ಕೆ ಮಾತ್ರ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ತಮಿಳುನಾಡು ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಗೆ (TNCC) ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯ ಮುಂದೆ ಹತ್ತು ಹಲವು ಸವಾಲು
ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಇನ್ನೂ 10 ಸ್ಥಾನಗಳ ಕೊರತೆಯಿದೆ (ಒಟ್ಟು 234 ಸ್ಥಾನಗಳಲ್ಲಿ 118 ಬಹುಮತದ ಸಂಖ್ಯೆ). ವಿಜಯ ಅವರು ತಾವು ಸ್ಪರ್ಧಿಸಿದ್ದ ಪೆರಂಬೂರು ಮತ್ತು ತಿರುಚಿರಾಪಳ್ಳಿ (ಪೂರ್ವ) ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ನಿಯಮದಂತೆ ಅವರು ಒಂದು ಸ್ಥಾನ ಬಿಡಬೇಕಿದ್ದು, ತಿರುಚಿರಾಪಳ್ಳಿ ಕ್ಷೇತ್ರವನ್ನು ತ್ಯಜಿಸುವ ಸಾಧ್ಯತೆಯಿದೆ. ಆಗ ಪಕ್ಷದ ಬಲ 107ಕ್ಕೆ ಕುಸಿಯಲಿದೆ. ಸ್ಪೀಕರ್ ಆಯ್ಕೆಯಾದ ಬಳಿಕ ವಿಶ್ವಾಸಮತ ಯಾಚನೆಯ ವೇಳೆ ಅವರು ಮತ ಹಾಕುವಂತಿಲ್ಲ. ಇದರಿಂದ ಟಿವಿಕೆಯ ಪರಿಣಾಮಕಾರಿ ಬಲ 106ಕ್ಕೆ ಇಳಿಯಲಿದೆ.
ಈ ಲೆಕ್ಕಾಚಾರದ ಪ್ರಕಾರ, ವಿಜಯ ಅವರು ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 12 ಶಾಸಕರ ಬೆಂಬಲವನ್ನು ಕ್ರೋಢೀಕರಿಸಬೇಕಾದ ಅನಿವಾರ್ಯತೆ ಇದೆ.
ವಿಧಾನಸಭೆಯ ಪ್ರಸ್ತುತ ಚಿತ್ರಣ
ಪ್ರಸ್ತುತ ಕಾಂಗ್ರೆಸ್ಸಿನ ಐವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಡಿಎಂಕೆ ಮೈತ್ರಿಕೂಟದಲ್ಲಿ ಎಡಪಕ್ಷಗಳು (4), ಐಯುಎಂಎಲ್ (2), ವಿಸಿಕೆ (2) ಮತ್ತು ಡಿಎಂಡಿಕೆ (1) ಸ್ಥಾನಗಳನ್ನು ಹೊಂದಿವೆ. ಮತ್ತೊಂದೆಡೆ ಎಐಎಡಿಎಂಕೆ ಮೈತ್ರಿಕೂಟದಲ್ಲಿ ಪಿಎಂಕೆ (4), ಬಿಜೆಪಿ (1) ಮತ್ತು ಎಎಂಎಂಕೆ ಪಕ್ಷದ (1) ಸ್ಥಾನಗಳಿವೆ.
ಕಾಂಗ್ರೆಸ್ ಒಂದು ವೇಳೆ ಬೆಂಬಲ ನೀಡಿದರೂ, ಮ್ಯಾಜಿಕ್ ನಂಬರ್ ತಲುಪಲು ವಿಜಯ ಅವರು ಇತರ ಸಣ್ಣ ಪಕ್ಷಗಳ ಮನವೊಲಿಸಬೇಕಾಗಿದೆ.
