ಕೌಜಲಗಿ: ಸಾಗರದಿಂದ ತೇರದಾಳ ಪಟ್ಟಣಕ್ಕೆ ಕೈಗೊಂಡಿರುವ ಪವಿತ್ರ ವಿಹಾರ ಮಾರ್ಗದ ಮಧ್ಯೆ, ಪರಮ ಪೂಜ್ಯ ಆಚಾರ್ಯ ಶಿರೋಮಣಿ 108 ಶ್ರೀ ವಿದಿತ್ ಮಹಾರಾಜರು ಇಂದು ಇಲ್ಲಿನ ಸ್ಥಳೀಯ ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆಗೆ ಆಗಮಿಸಿ, ಒಂದು ದಿನದ ಮಟ್ಟಿಗೆ ಭವ್ಯ ವಾಸ್ತವ್ಯ ಹೂಡಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಪೂಜ್ಯ ಆಚಾರ್ಯ ಶ್ರೀಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಂಗಲ ಆಶೀರ್ವಚನ ನೀಡಿದರು. "ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು, ಸಂಸ್ಕಾರ ಮತ್ತು ಗುರು-ಹಿರಿಯರಲ್ಲಿ ಭಕ್ತಿ ಅತ್ಯಂತ ಮುಖ್ಯ. ಕೇವಲ ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ, ಅದು ಜೀವನದಲ್ಲಿ ಉತ್ತಮ ನಡತೆಯಾಗಿ ಪರಿವರ್ತನೆಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಸತ್ಪ್ರಜೆಯಾಗಿ ಬೆಳೆಯಬೇಕು" ಎಂದು ಶ್ರೀಗಳು ತಮ್ಮ ಅಮೃತ ವಾಣಿಯ ಮೂಲಕ ಬೋಧಿಸಿದರು.
ಶ್ರೀಗಳ ಆಗಮನದಿಂದ ಇಡೀ ಶಾಲಾ ಆವರಣದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.