ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚು ಹಚ್ಚಿಕೊಳ್ಳುತ್ತವೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಪುಷ್ಠಿ ನೀಡುವಂತಹ ಮನಮಿಡಿಯುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ತನಗೆ ತುತ್ತು ಅನ್ನ ನೀಡುತ್ತಿದ್ದ ಒಡತಿ ಮೃತಪಟ್ಟ ನಂತರ ಅವಳ ಸಮಾಧಿಯನ್ನೇ ಕಾಯುತ್ತಾ ಕುಳಿತಿರುವ ಬೀದಿನಾಯಿಯ ನಿಷ್ಠೆಯ ಸುದ್ದಿ ಈಗ ಎಲ್ಲರ ಕಣ್ಣು ಒದ್ದೆ ಮಾಡುತ್ತಿದೆ.
ಕೇರಳದ ಪತಪ್ಪಿರಿಯಂ ಪೆರುವಿಲ್ಕುಂಡು ಪಳಿಯಪೀಡಿಯಕ್ಕಲ್ ನಿವಾಸಿ ಅಮೀನಾ ಎಂಬವರು ಕಳೆದ ವಾರ ತಮ್ಮ ಮಗಳ ಮನೆಯಿಂದ ಮರಳುತ್ತಿದ್ದಾಗ ಮನೆಯ ಹತ್ತಿರವೇ ದಿಢೀರನೆ ಕುಸಿದು ಬಿದ್ದಿದ್ದರು. ಆರಂಭದಲ್ಲಿ ಯಾರಿಗೂ ಇದು ಗಮನಕ್ಕೆ ಬಂದಿರಲಿಲ್ಲ. ಆದರೆ, ಆ ಭಾಗದಲ್ಲಿ ಅಲೆದಾಡುತ್ತಿದ್ದ ಬೀದಿನಾಯಿಯೊಂದು ವಿಚಿತ್ರವಾಗಿ ವರ್ತಿಸಲು ಶುರುಮಾಡಿತು. ಅದು ನಿರಂತರವಾಗಿ ಬೊಗಳುತ್ತಾ, ಅತ್ತಿತ್ತ ಓಡುತ್ತಾ ಯಾರನ್ನೋ ಕರೆಯುತ್ತಿರುವಂತೆ ಕಂಡಿತು.
ನಾಯಿಯ ಈ ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ನೆರೆಹೊರೆಯವರು ಮತ್ತು ಕುಟುಂಬಸ್ಥರು ಅದನ್ನು ಹಿಂಬಾಲಿಸಿ ಹೋದಾಗ ಅಮೀನಾ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಒಂದು ತುತ್ತು ಅನ್ನ; ಬಿಡದ ಬಂಧ
ಅಮೀನಾ ಅವರು ಪ್ರತಿದಿನ ಈ ಬೀದಿನಾಯಿಗೆ ಆಹಾರ ನೀಡುತ್ತಿದ್ದರು. ಆ ಪುಟ್ಟ ಪ್ರೀತಿಯ ಕೆಲಸವೇ ಇಂದು ಇಂತಹ ಬಲವಾದ ಬಂಧಕ್ಕೆ ಕಾರಣವಾಗಿದೆ. ಅಮೀನಾ ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಮಸೀದಿಗೆ ಕೊಂಡೊಯ್ಯುವಾಗಲೂ ಈ ನಾಯಿ ಶವಯಾತ್ರೆಯ ಉದ್ದಕ್ಕೂ ಹಿಂಬಾಲಿಸಿತ್ತು. ಅಂತಿಮ ವಿಧಿವಿಧಾನಗಳು ಮುಗಿದು ಎಲ್ಲರೂ ಮನೆಗೆ ಮರಳಿದರೂ, ಈ ಶ್ವಾನ ಮಾತ್ರ ಅಲ್ಲಿಂದ ಕದಲಿಲ್ಲ.
ಸಮಾಧಿಯ ಬಳಿಯೇ ವಾಸ್ತವ್ಯ
ಕಳೆದ ಹಲವಾರು ದಿನಗಳಿಂದ ಈ ನಾಯಿ ಅಮೀನಾ ಅವರ ಸಮಾಧಿಯ ಪಕ್ಕದಲ್ಲೇ ಶಾಂತವಾಗಿ ಕೆಲ ಕಾಲ ಕುಳಿತು ಬರುತ್ತಿದೆ. ಅಮೀನಾ ಅವರ ಮಕ್ಕಳು ಅಥವಾ ಮೊಮ್ಮಕ್ಕಳು ಸಮಾಧಿಗೆ ಭೇಟಿ ನೀಡಿದಾಗ, ಈ ನಾಯಿ ಅವರ ಜೊತೆಗೂಡಿ ಮೌನವಾಗಿ ನಿಲ್ಲುತ್ತದೆ. ಅವರು ಅಲ್ಲಿಂದ ಹೊರಡುವವರೆಗೂ ಜೊತೆಗಿದ್ದು, ನಂತರ ಮತ್ತೆ ಸಮಾಧಿಯ ಬಳಿಯೇ ತನ್ನ ಸ್ಥಾನಕ್ಕೆ ಮರಳುತ್ತದೆ.
“ಪ್ರೀತಿಗೆ ಭಾಷೆಯ ಹಂಗಿಲ್ಲ, ನಿಷ್ಠೆಗೆ ಸಾವಿನ ಭಯವಿಲ್ಲ” ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಕೇವಲ ಆಹಾರ ನೀಡುತ್ತಿದ್ದ ಒಬ್ಬ ವ್ಯಕ್ತಿಯ ಮೇಲೆ ಈ ಮೂಕಜೀವಿ ತೋರುತ್ತಿರುವ ಗೌರವ ಮತ್ತು ಮಮತೆ ಈಗಿನ ಸಮಾಜಕ್ಕೆ ದೊಡ್ಡ ಪಾಠವಾಗಿದೆ.
ಸ್ಥಳೀಯರು ಈ ದೃಶ್ಯವನ್ನು ನೋಡಿ ಭಾವುಕರಾಗುತ್ತಿದ್ದು, “ಎಲ್ಲೋ ಇರುವ ನಿಷ್ಠೆ ಇಲ್ಲಿ ಸಮಾಧಿಯ ಬಳಿ ಮೌನವಾಗಿ ಕುಳಿತಿದೆ” ಎಂದು ಶ್ಲಾಘಿಸುತ್ತಿದ್ದಾರೆ. ಅನಿರೀಕ್ಷಿತ ಜಾಗದಲ್ಲಿ ದೊರೆತ ಈ ಅಪಾರ ಪ್ರೀತಿ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.