ಬೆಳಗಾವಿ : ಗೋವಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇತನ್ ಭಾಟಿಕರ್ ಹಾವು ಕಡಿದು ಮೃತಪಟ್ಟ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಘಟ್ಟ ಪ್ರದೇಶದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಗೋವಾದ ಪೋಂಡಾದ ನಿವಾಸಿಯಾಗಿದ್ದ ಕೇತನ್ ಭಾಟಿಕರ್ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಸಮೀಪದ ಅನಮೋಡ್ ಭಾಗಕ್ಕೆ ಬಂದಿದ್ದರು. ಈ ವೇಳೆ ಘಟ್ಟ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ಕಾಡಿನತ್ತ ತೆರಳಿದಾಗ ನಾಗರಹಾವು ಇಲ್ಲವೇ ಬೇರೆ ಯಾವುದೋ ಹಾವು ಕಡಿದಿದೆ ಎನ್ನಲಾಗಿದೆ.
ಹಾವು ಕಡಿದ ತಕ್ಷಣ ಅವರನ್ನು ಗೋವಾದ ಬಾಂಬೋಲಿನ್‌ನಲ್ಲಿರುವ ಜಿಎಂಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕೋಲಮ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೇತನ್ ಭಾಟಿಕರ್ ಗೋವಾದ ಪೋಂಡಾ ವಿಧಾನಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಗೋವಾ ಕೃಷಿ ಸಚಿವ ರವಿ ನಾಯ್ಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆಯುತ್ತಿದ್ದ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರು. ಜನಸಂಪರ್ಕ ಹಾಗೂ ಸಂಘಟನಾ ಸಾಮರ್ಥ್ಯದಿಂದ ಗೆಲುವ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದರು.
