ಗೋಕಾಕ: ಗೋಕಾಕ ತಾಲೂಕು ನಾರಾಯಣ ಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಗಾಣಗಿ ಅವರನ್ನು ಶುಕ್ರವಾರ ಹೃದಯಸ್ಪರ್ಶಿಯಾಗಿ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ವರ್ಗಾವಣೆಗೊಂಡಿರುವ ಶಿಕ್ಷಕಿಯ ಸೇವೆಯನ್ನು ನೆನೆಸಿಕೊಂಡು ಭಾವುಕರಾದರು.
ಗೀತಾ ಗಾಣಗಿ ಅವರು 15 ವರ್ಷಗಳ ಕಾಲ ನಾರಾಯಣ ಕೇರಿ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಿ ಅವರಿಗೆ ಶ್ರೇಷ್ಠ ಸಂಸ್ಕಾರವನ್ನು ನೀಡಿರುವುದು ನಿಜಕ್ಕೂ ಅಭಿನಂದೀಯ. ಅವರು ಮಾದರಿ ಶಿಕ್ಷಕಿ. ಈ ಶಾಲೆಯ ಗೌರವ ಹೆಚ್ಚಿಸುವಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಶ್ರಮಿಸಿರುವ ಅವರ ಸೇವೆ ಶಿಕ್ಷಕ ಸಮುದಾಯಕ್ಕೆ ಮಾದರಿಯಂತಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಗೀತಾ ಗಾಣಗಿ ಅವರು ಕೈಗೊಂಡ ಸುಧಾರಣೆ ಕ್ರಮಗಳನ್ನು ಪ್ರತಿಯೊಬ್ಬರು ಮುಕ್ತ ಕಂಠದಿಂದ ಎಂದು ಕೊಂಡಾಡಿದರು.
ಸಿ ಆರ್ ಪಿ ಹಳ್ಳಿ ಅವರು ಮಾತನಾಡಿ, ಶಿಕ್ಷಕಿ ಗೀತಾ ಗಾಣಗಿ ಅವರು ಶ್ರೇಷ್ಠ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎರಡು ವರ್ಷಗಳ ಹಿಂದಷ್ಟೇ ತಾಲೂಕು ಮಟ್ಟದ ಶ್ರೇಷ್ಠ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವುದು ಅವರ ಸಾಧನೆಗೆ ಹಿಡಿದ ಗರಿಯಾಗಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ನಾರಾಯಣಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಿಂದ ಇತ್ತೀಚಿಗಷ್ಟೇ ಗೀತಾ ಗಾಣಗಿ ಅವರು ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಶೈಕ್ಷಣಿಕ ಸೇವೆ ದೊರೆತು ಅವರು ಉನ್ನತ ಮಟ್ಟಕ್ಕೆ ಸಾಧನೆ ಮಾಡುವಂತಾಗಲೇ ಎಂದು ಗ್ರಾಮಸ್ಥರು ಶುಭ ಹಾರೈಸಿ ಬಿಳ್ಕೊಟ್ಟರು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶಿಕ್ಷಕಿಯ ಭವಿಷ್ಯದ ದಿನಗಳು ಇನ್ನು ಶ್ರೇಷ್ಠ ಮಟ್ಟದಿಂದ ಹೊರಹೊಮ್ಮುವಂತಾಗಲಿ ಎಂದು ನುಡಿದರು.