ಕಾಬೂಲ್: ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರ ಅನುಮೋದನೆ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಕೌಟುಂಬಿಕ ಕಾನೂನು ನಿಯಂತ್ರಣವನ್ನು ಜಾರಿಗೆ ತರಲಾಗಿದೆ. ಇಸ್ಲಾಮಿಕ್ ಕಾನೂನಿನ ತನ್ನದೇ ಆದ ವ್ಯಾಖ್ಯಾನದಡಿಯಲ್ಲಿ ವಿವಾಹ, ವಿಚ್ಛೇದನ ಮತ್ತು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ “ದಂಪತಿಗಳ ನಡುವಿನ ಪ್ರತ್ಯೇಕತೆಯ ತತ್ವಗಳು” (Principles of Separation Between Spouses) ಎಂಬ 31 ವಿಧಿಗಳ ಸುಗ್ರೀವಾಜ್ಞೆಯನ್ನು ತಾಲಿಬಾನ್ ಸರ್ಕಾರ ಪ್ರಕಟಿಸಿದೆ.
ತಾಲಿಬಾನ್ ಆಡಳಿತದಡಿ ವಿವಾಹ ವಿವಾದಗಳು, ಪ್ರತ್ಯೇಕತೆ, ಪೋಷಕತ್ವ ಮತ್ತು ವಿವಾಹ ರದ್ದತಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಈ ದಾಖಲೆಯು ರೂಪಿಸಿದೆ ಎಂದು ‘ಅಮು ಟಿವಿ’ ವರದಿ ಮಾಡಿದೆ. ಈ ಸುಗ್ರೀವಾಜ್ಞೆಯ ಅತ್ಯಂತ ವಿವಾದಾತ್ಮಕ ವಿಧಿಗಳಲ್ಲಿ ಒಂದಾದ ಪ್ರಮುಖವಾದ ವಿಧಿಯಲ್ಲಿ, ಮದುವೆಯ ವಿಷಯದಲ್ಲಿ “ಕನ್ಯೆ”ಯ (virgin girl) ಮೌನವನ್ನು ಆಕೆಯ ಸಮ್ಮತಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಒಬ್ಬ ಹುಡುಗನ ಅಥವಾ ವಿವಾಹಿತ ಮಹಿಳೆಯ ಮೌನವನ್ನು ಮದುವೆಗೆ ಒಪ್ಪಿಗೆ ಎಂದು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಿಯಮ ಹೇಳುತ್ತದೆ.
ಅಪ್ರಾಪ್ತರ ವಿವಾಹ ಮತ್ತು ಪೋಷಕರ ಅಧಿಕಾರ
ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅಪ್ರಾಪ್ತರ ನಡುವಿನ ವಿವಾಹಕ್ಕೆ ಈ ದಾಖಲೆಯು ಅನುಮತಿ ನೀಡುತ್ತದೆ. ಅಂತಹ ಮದುವೆಯ ವ್ಯವಸ್ಥೆಗಳನ್ನು ಮಾಡುವ ಸಂಪೂರ್ಣ ಅಧಿಕಾರವನ್ನು ತಂದೆ ಮತ್ತು ತಾತಂದಿರಿಗೆ ವಹಿಸಲಾಗಿದೆ. ಮದುವೆಯಾಗಲಿರುವ ವರನು ಸಾಮಾಜಿಕವಾಗಿ ಸೂಕ್ತನಾಗಿದ್ದರೆ ಮತ್ತು ವಧುದಕ್ಷಿಣೆ (dowry) ಧಾರ್ಮಿಕ ಮಾನದಂಡಗಳನ್ನು ಪೂರೈಸಿದ್ದರೆ, ಸಂಬಂಧಿಕರು ಏರ್ಪಡಿಸುವ ಅಪ್ರಾಪ್ತ ಹುಡುಗ ಅಥವಾ ಹುಡುಗಿಯ ವಿವಾಹವನ್ನು ಸಿಂಧು ಎಂದು ಪರಿಗಣಿಸಬಹುದು ಎಂದು ಕಾನೂನು ಹೇಳುತ್ತದೆ.
ಈ ನಿಯಮವು ‘ಖಿಯಾರ್ ಅಲ್-ಬುಲೂಗ್’ (Option after puberty – ಪ್ರಾಯಕ್ಕೆ ಬಂದ ನಂತರದ ಆಯ್ಕೆ) ಎಂಬ ಇಸ್ಲಾಮಿಕ್ ಕಾನೂನು ಸಿದ್ಧಾಂತವನ್ನು ಒಳಗೊಂಡಿದೆ. ಇದರ ಪ್ರಕಾರ, ಪ್ರಾಯಪೂರ್ವದಲ್ಲಿ (ಬಾಲ್ಯದಲ್ಲಿ) ನಿಶ್ಚಯಿಸಲ್ಪಟ್ಟ ವಿವಾಹವನ್ನು, ಮಗುವಿಗೆ ಪ್ರಾಯ ಬಂದ ತಕ್ಷಣ ಆ ಮಗುವಿನ ಕೋರಿಕೆಯ ಮೇರೆಗೆ ರದ್ದುಗೊಳಿಸಲು ಅವಕಾಶವಿದೆ. ಆದರೆ, ಈ ವಿವಾಹ ರದ್ದತಿಗೆ ಧಾರ್ಮಿಕ ನ್ಯಾಯಾಲಯಗಳ ಸಮ್ಮತಿ ಕಡ್ಡಾಯವಾಗಿದೆ. ಇದರೊಂದಿಗೆ, ಹುಡುಗ ಅಥವಾ ಹುಡುಗಿ ಪರಸ್ಪರ ಸೂಕ್ತವಾಗಿಲ್ಲದಿದ್ದರೆ ಅಥವಾ ವಧುದಕ್ಷಿಣೆ ಅತ್ಯಂತ ಅಸಮತೋಲನದಿಂದ ಕೂಡಿದ್ದರೆ ಅಂತಹ ಮದುವೆಯು ಕಾನೂನುಬದ್ಧವಾಗಿ ಸಿಂಧುವಾಗುವುದಿಲ್ಲ.
ನ್ಯಾಯಾಧೀಶರ ಮಧ್ಯಪ್ರವೇಶ ಮತ್ತು ಕಠಿಣ ಶಿಕ್ಷೆಗಳು
ಕೆಲವು ನಿರ್ದಿಷ್ಟ ವಿವಾದಗಳಲ್ಲಿ ಮಧ್ಯಪ್ರವೇಶಿಸಲು ಈ ಸುಗ್ರೀವಾಜ್ಞೆಯು ತಾಲಿಬಾನ್ ನ್ಯಾಯಾಧೀಶರಿಗೆ ಸಂಪೂರ್ಣ ಅಧಿಕಾರ ನೀಡಿದೆ. ವ್ಯಭಿಚಾರದ ಆರೋಪಗಳು, ಧಾರ್ಮಿಕ ಮತಾಂತರ, ಪತಿ ದೀರ್ಘಕಾಲದವರೆಗೆ ಗೈರುಹಾಜರಾಗಿರುವುದು ಈ ವಿಷಯಗಳಲ್ಲಿ ನ್ಯಾಯಾಧೀಶರು ಮಧ್ಯಪ್ರವೇಶಿಸಬಹುದು.
‘ಜಿಹಾರ್’ (zihar) ಎಂಬುದು ಶಾಸ್ತ್ರೀಯ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದು, ಇದರಲ್ಲಿ ಪತಿಯು ತನ್ನ ಹೆಂಡತಿಯನ್ನು ತಾನು ಮದುವೆಯಾಗಲು ನಿಷೇಧಿಸಲ್ಪಟ್ಟಿರುವ ಮಹಿಳಾ ಸಂಬಂಧಿಗೆ (ಉದಾಹರಣೆಗೆ ತಾಯಿ ಅಥವಾ ಸಹೋದರಿ) ಹೋಲಿಸುವುದಾಗಿದೆ. ಇಂತಹ ಪ್ರಕರಣಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ದಂಪತಿಗಳನ್ನು ಬೇರ್ಪಡಿಸಲು, ಜೈಲು ಶಿಕ್ಷೆ ವಿಧಿಸಲು ಅಥವಾ ಇತರ ಕಠಿಣ ಶಿಕ್ಷೆಗಳನ್ನು ನೀಡಲು ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ.
ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಆಕ್ರೋಶ
ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹೇರುತ್ತಿರುವ ನಿರಂತರ ನಿರ್ಬಂಧಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶದ ನಡುವೆಯೇ ಹೊಸ ಕೌಟುಂಬಿಕ ನಿಯಮಾವಳಿಗಳು ಹೊರಬಂದಿವೆ.
ಸದ್ಯ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಆರನೇ ತರಗತಿಯ ನಂತರ ಶಾಲಾ ಶಿಕ್ಷಣವನ್ನು ನಿಷೇಧಿಸಲಾಗಿದೆ. ಮಹಿಳೆಯರು ವಿಶ್ವವಿದ್ಯಾಲಯಗಳಿಗೆ ಹೋಗುವುದನ್ನು ನಿರ್ಬಂಧಿಸಲಾಗಿದ್ದು, ಅವರ ಉದ್ಯೋಗ, ಪ್ರಯಾಣ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೇಲೆ ತೀವ್ರ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.
