ನವದೆಹಲಿ: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಮತ್ತೆ ರಕ್ತಪಾತ ಮುಂದುವರಿದಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕ ಹಾಗೂ ಮಮತಾ ಬ್ಯಾನರ್ಜಿ ಅವರನ್ನು ಅವರ ಸ್ವಕ್ಷೇತ್ರದಲ್ಲೇ ಹೀನಾಯವಾಗಿ ಸೋಲಿಸಿರುವ ಬಿಜೆಪಿಯ ಹಿರಿಯ ಮುಖಂಡ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರನ್ನು ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಮಧ್ಯಮಗ್ರಾಮ ಪ್ರದೇಶದ ಸಾರ್ವಜನಿಕ ರಸ್ತೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಂದ್ರನಾಥ ರಥ್ ಅವರು ಕಾರಿನಲ್ಲಿ ಇದ್ದಾಗ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಕೋರರು ಕಾರಿನ ಕಿಟಕಿ ಗಾಜಿಗೆ ಪಿಸ್ತೂಲ್ ಹಚ್ಚಿ ತೀರಾ ಹತ್ತಿರದಿಂದ (ಪಾಯಿಂಟ್ ಬ್ಲಾಂಕ್ ರೇಂಜ್) ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಥಳದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಕನಿಷ್ಠ ಮೂರು ಸುತ್ತು ಗುಂಡು ಹಾರಿಸಲಾಗಿದೆ. ದೇಹದ ಹಲವು ಭಾಗಗಳಿಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಥ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು.
ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರ
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC), ಭಾರತೀಯ ಜನತಾ ಪಾರ್ಟಿ (BJP) ವಿರುದ್ಧ ಹೀನಾಯ ಸೋಲು ಅನುಭವಿಸಿದ 48 ಗಂಟೆಗಳ ಒಳಗಾಗಿಯೇ ಈ ಹತ್ಯೆ ನಡೆದಿದೆ. ಈ ಘಟನೆಯು ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.
ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹತ್ಯೆಯ ಹಿಂದಿನ ನಿಖರ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರದ ಹಿಂಸಾಚಾರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೂ ಮೊದಲು ಮಂಗಳವಾರವಷ್ಟೇ, ರಾಜರಹತ್-ನ್ಯೂಟೌನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಚುನಾವಣಾ ಸೋಲಿನ ಹತಾಶೆಯಿಂದ ತೃಣಮೂಲ ಕಾಂಗ್ರೆಸ್ (TMC) ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
