ಬೆಂಗಳೂರು: ಸಕಲ ಕನ್ನಡಿಗರ ಏಕಮೇವ ಹೆಮ್ಮೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಈ ಬಾರಿ ವಿಶೇಷ ರಂಗು ಪಡೆಯುವ ಸಾಧ್ಯತೆ ಇದೆ. ಬೆಳಗಾವಿ ಮೂಲದ ಮಹಿಳೆಯೊಬ್ಬರು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹುದ್ದೆಗೆ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇವರಿಗೆ ನಾಡಿನ ಅತ್ಯಂತ ಪ್ರತಿಷ್ಠಿತ ಲಿಂಗಾಯತ ಮಠ ವಾಗಿರುವ ಗದಗ ತೋಂಟದಾರ್ಯ ಮಠದ ಜಗದ್ಗುರುಗಳು ಸಂಪೂರ್ಣ ಆಶೀರ್ವಾದ ಮಾಡಿರುವುದು ಗಮನ ಸೆಳೆದಿದೆ. ಸ್ವತಃ ಸ್ವಾಮೀಜಿ ಅವರು ಬೆಳಗಾವಿ ಮೂಲದ ಮಹಿಳೆಯ ಚುನಾವಣೆಯ ಅಭಿಲಾಷೆಗೆ ಬೆಂಬಲವಾಗಿ ನಿಂತಿದ್ದಾರೆ. ಜೊತೆಗೆ ಬೆಳಗಾವಿಯ ಹಲವು ಸಂಘಟನೆಗಳು ಮಹಿಳೆಯೊಬ್ಬರು ಅಧ್ಯಕ್ಷ ಹುದ್ದೆ ಪಡೆಯಲು ಬೇಕಾದ ತಯಾರಿಗಳನ್ನು ಮಾಡಲು ಮೌಖಿಕವಾಗಿ ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಬಹುದೊಡ್ಡ ಹೆಸರು. ಜೊತೆಗೆ ಚಿನ್ನದ ಪದಕ ವಿಜೇತರು. ಬರಹಗಾರರಾಗಿ ಅವರು ಹೆಸರುವಾಸಿಯಾಗಿದ್ದಾರೆ. ಇದೀಗ ಅವರು ಕನ್ನಡ ಸಾಹಿತ್ಯ ಪರಿಷತ್ತು ಚುಕ್ಕಾಣಿ ಹಿಡಿಯುವ ಮೂಲಕ ಸಾಹಿತ್ಯ ಪರಿಷತ್ತಿಗೆ ನವ ಚೈತನ್ಯ ತರಲು ಮುಂದಾಗಿರುವುದು ವಿಶೇಷವಾಗಿದೆ.
ಕನ್ನಡದ ಆಸ್ಥಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಸಂಕಲ್ಪ ಮಾಡಿದ್ದಾರೆ.
ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷರಾದರೆ ಸಾಹಿತ್ಯ ಪರಿಷತ್ತಿಗೆ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಹೆಸರಾಂತ ಹೃದ್ರೋಗ ತಜ್ಞೆಯಾಗಿದ್ದಾರೆ. ನೂರಾರು ಸರ್ಜರಿಗಳನ್ನು ಮಾಡಿ ಜನರ ಜೀವ ಉಳಿಸಿದ್ದಾರೆ. ಅವರು ವೈದ್ಯರಾಗಿದ್ದರೂ ಸಾಹಿತ್ಯದ ಬಗ್ಗೆ ಆಸಕ್ತಿ ಇದೆ. ಹಲವು ಕೃತಿಗಳನ್ನು ರಚನೆ ಮಾಡಿದ್ದಾರೆ.
ಕಸಾಪ ಸಂಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದಕ್ಕೆ ಸರ್ಜರಿ ಮಾಡಲೇಬೇಕು ಎಂದು ಸಂಕಲ್ಪ ಮಾಡಿದ್ದಾರೆ ಎಂದು ಅವರ ಆಪ್ತ ಬಳಗದ ಮೂಲಗಳು ಹೇಳಿವೆ.
ಅವರು ಹೃದ್ರೋಗ ತಜ್ಞೆಯಾಗಿದ್ದರೂ ಸಾಹಿತ್ಯದ ಕೆಲಸಗಳಿಗೆ ಮುಂದಾಗಿದ್ದರು. ಈ ಹಿಂದೆ ಕನ್ನಡ ಸಾಹಿತ್ಯ
ಪರಿಷತ್ತಿನ ಸಮ್ಮೇಳನಗಳಲ್ಲಿ ಭಾಗಿಯಾಗಿ ಕನ್ನಡದ ಕೆಲಸಗಳು ಹೇಗೆ ಸಾಗಬೇಕು ಎಂಬ ಅನಿಸಿಕೆಯನ್ನೂ ವ್ಯಕ್ತಪಡಿಸಿದ್ದರು. ಬೆಳಗಾವಿಯಲ್ಲಿ ನಡೆದ ಬೆಳಗಾವಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕನ್ನಡ ಸಾಹಿತ್ಯ, ಕನ್ನಡದ ಸಂಗೀತ, ಸಂಸ್ಕೃತಿಗಳು ಕನ್ನಡಿಗರ ಮನಮುಟ್ಟಬೇಕು ಎಂಬ ಸಂದೇಶ ಸಾರಿದ್ದರಲ್ಲದೆ, ಸಾಹಿತ್ಯ ಎಂಬದು ಎಲ್ಲರನ್ನು ಬೆಸೆಯುವ ಕೆಲಸವಾಗಬೇಕು. ವಿಭಜಿಸುವ ಕಾರ್ಯವಾಗಬಾರದು ಎಂದು ಹೇಳುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಗಳ ನೇಮಕವಾಗಿದೆ. ಇದರಿಂದ ಕನ್ನಡದ ಕೆಲಸಗಳು ಸುಗಮವಾಗಿ ನಡೆಯುವುದಿಲ್ಲ. ಕಸಾಪಗೆ ಚುನಾವಣೆ ನಡೆದು ಅದಕ್ಕೆ ಸಾರಥಿ ಬಂದರೆ ಒಳಿತು ಎಂದು ಹೇಳುವ ಅವರು ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದುವರೆಗೆ ಮಹಿಳೆಯರು ಅಧ್ಯಕ್ಷರಾಗಿಲ್ಲ. ಇದೇ ಮೊದಲ ಬಾರಿಗೆ ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಸ್ಪರ್ಧಿಯಾಗಲು ಮುಂದಾಗಿದ್ದಾರೆ. ಅವರು ಚುನಾಯಿತರಾದಲ್ಲಿ ಕಸಾಪ ಸಂಸ್ಥೆ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಅವರನ್ನು ಬಲ್ಲವರು ಹೇಳುತ್ತಿದ್ದಾರೆ.