ಕಠ್ಮಂಡು:
ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ.
ವಿಮಾನದಲ್ಲಿ ಒಟ್ಟು 15 ವಿದೇಶಿ ಪ್ರಯಾಣಿಕರು ಸೇರಿದಂತೆ 68 ಮಂದಿ ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ.
ಯೇತಿ ಏರ್ಲೈನ್ಸ್ 9N-ANC ATR-72 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಪೋಖರಾದಲ್ಲಿ ಲ್ಯಾಂಡಿಂಗ್ ವೇಳೆ ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸೇತಿ ನದಿ ದಂಡೆ ಮೇಲೆ ವಿಮಾನ ಪತನಗೊಂಡಿದೆ.
ಇದು ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ತಿ ವಿಮಾನ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಸಕಿ ಜಿಲ್ಲಾಧಿಕಾರಿ ಟೆಕ್ ಬಹಾದ್ದೂರ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ.