ಪ್ರಶಸ್ತಿಗಿಂತ ಅದರ ಮೂಲ ಉದ್ದೇಶ ಬಹಳ ಮುಖ್ಯ..!


VTU ದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್. ಪಾಟೀಲ ಅಭಿಮತ.

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನ್ನ ಸಂಸ್ಕೃತಿಯಂತೆ ಪ್ರತಿ ಬಾರಿ ಬೆಳಗಾವಿ ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಹನಿಯರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿತ್ತು.

ಕೋವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ವಯ ಕೇವಲ ಸನ್ಮಾನ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿ ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಸಮಾಜ ಸೇವಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿ ಜಿಲ್ಲೆ ಅಥಣಿಯ ಬಿ. ಎಲ್.ಪಾಟೀಲ್ ಅವರನ್ನು ವಿ ಟಿ ಯುನ ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ವಿಟಿಯು ಪರವಾಗಿ ಸನ್ಮಾನ ಮಾಡಿದರು.

ಸನ್ಮಾನ ಸ್ವಿಕರಿಸಿ ಮಾತನಾಡಿದ ಬಿ.ಎಲ್.ಪಾಟೀಲ ಅವರು, ಪ್ರಶಸ್ತಿ ಮುಖ್ಯ ಅಲ್ಲ. ಆದರೆ ಆ ಪ್ರಶಸ್ತಿಗೆ ಕಾರಣವಾದ ಮೂಲ ಉದ್ದೇಶ ಹಾಗೂ ಅದರ ನಿರ್ವಹಣೆ ಮತ್ತು ಅನುಷ್ಠಾನ ಬಹಳ ಮುಖ್ಯ. ಆ ಉದ್ದೇಶಕ್ಕೆ ಸಮಾಜವನ್ನು ಧನಾತ್ಮಕವಾಗಿ ಬದಲಾಯಿಸಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಅದಮ್ಯ ಶಕ್ತಿ ಇರುತ್ತದೆ ಎಂದು ಹೇಳಿದರು.

ತಮ್ಮ ಸೇವೆ ಬಗ್ಗೆ ಮಾತನಾಡಿ, ವಕೀಲ ವೃತ್ತಿಯಲ್ಲಿದ್ದ ತಾವು ಸಮಾಜ ಸೇವೆಗೆ ಧುಮುಕಿದ್ದರ ಕಟು ಅನುಭವಗಳ ಜೊತೆ ವಿಡಂಬನಾತ್ಮಕ ಶೈಲಿಯಲ್ಲಿ ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಎಸ್.ಜಿ.ಬಾಳೇಕುಂದ್ರಿ ಅವರು ತೋರಿದ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಬೆಳೆಸಿಕೊಳ್ಳಿ ಎಂದು ಹೇಳಿ ಸನ್ಮಾನಿಸಿದ ವಿಟಿಯುಗೆ ಧನ್ಯವಾದಗಳನ್ನು ತಿಳಿಸಿ ತಮ್ಮ ಈ ಪ್ರಶಸ್ತಿಗೆ ಕಾರಣರಾದ ಇಳಕಲ್ ನ‌ ಮಹಾಂತ ಗುರುಗಳಿಗೆ, ಗದಗನ ತೋಂಟದಾರ್ಯ ಸ್ವಾಮಿಗಳಿಗೆ ಹಾಗೂ ಪೇಜಾವರ ಶ್ರೀಗಳಿಗೆ ಮತ್ತು ಸಹಾಯ ಹಸ್ತ ಚಾಚಿದ ಎಲ್ಲರಿಗೂ ಪ್ರಶಸ್ತಿಯನ್ನು ಸಮರ್ಪಿಸಿದರು.

ಖ್ಯಾತ ‌ಹನಿಗವನ ರಚನಾಕಾರ ಎಚ್. ದುಂಡಿರಾಜ ಅವರು ಚುಟುಕುಗಳಿಂದಲೇ ಮಾತು ಆರಂಭಿಸಿ ಕನ್ನಡದ ಅಭಿಮಾನ ಹೇಗೆ ಇರಬೇಕು ಎನ್ನುತ್ತ ನಿರಾಭಿಮಾನವೂ ಇರಬಾರದು. ಹಾಗೆಯೇ ದುರಾಭಿಮಾನವೂ ಇರಬಾರದು. ಕನ್ನಡೇತರರಿಗೆ ಕನ್ನಡ ಭಾಷೆಯ ರಚನೆ ಸಾಹಿತ್ಯವನ್ನು ತಿಳಿಸಿ ಕನ್ನಡದ ಬಗ್ಗೆ ಅವರಲ್ಲಿ ಪ್ರೀತಿಯನ್ನು ಬೆಳೆಸಿ ನಮ್ಮ ಭಾಷೆಯನ್ನು ಬೆಳೆಸಬೇಕು ಎಂದು ಹೇಳಿದರು.

ತಮ್ಮ ಭಾಷಣದುದ್ದಕ್ಕು ತಮ್ಮ ಬ್ಯಾಂಕ್ ಸೇವೆಗೆ ಸಂಬಂಧಿಸಿದಂತೆ ರಚಿಸಲ್ಪಟ್ಟ ಹನಿಗವನಗಳನ್ನು ಹೇಳಿ ಅದಕ್ಕೆ ಕಾರಣವಾದ ಆ ಕ್ಷಣಗಳನ್ನು ಹಾಸ್ಯಮಯವಾಗಿ ವಿವರಿಸಿದರು. ಜೊತೆಗೆ ಸಾಮಾಜಿಕ ಬದುಕು, ಕನ್ನಡ ಭಾಷೆಯ ಬೆಳವಣಿಗೆ, ಗಂಡ-ಹೆಂಡತಿ ಶೃಂಗಾರ ಕ್ಷಣಗಳ ಬಗ್ಗೆ ಅನೇಕ ಹಾಸ್ಯಗವನಗಳ ಜೊತೆ ಆ ಕ್ಷಣಗಳನ್ನು ಬಹಳ ಹಾಸ್ಯಮಯವಾಗಿ ವಿವರಿಸಿ ನೆರೆದವರನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಎಂಜನಿಯರಿಂಗ್ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಈ ನಾಡಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅತ್ಯಂತ ಸರಳ ಕನ್ನಡದಲ್ಲಿ ತಿಳಿಸುವ ಮುಖಾಂತರ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ವಿಟಿಯು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕನ್ನಡದಲ್ಲಿ ತಾಂತ್ರಿಕ ಪದಕೋಶ ರಚನೆ, ತಾಂತ್ರಿಕ ಕ್ಷೇತ್ರದ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕ ರಚನೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕನ್ನಡ ಮಾಧ್ಯಮದಲ್ಲಿ ಎಂಜನಿಯರಿಂಗ್ ಶಿಕ್ಷಣ ಆರಂಭ ಹಾಗೂ ಅದಕ್ಕೆ ಅವಶ್ಯ ಇರುವ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಲು ಈಗಾಗಲೇ ವಿಟಿಯು ಕೈಗೊಂಡಿದೆ ಎಂದು ಹೇಳಿದರು.

ವಿಟಿಯು ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿ ವಿಜ್ಞಾನ ಪ್ರಯೋಗಾಲಯ ಹಾಗೂ ಇನ್ನಿತರ ಅವಶ್ಯಕ ಸೌರ‍್ಯಗಳನ್ನು ಒದಗಿಸುವ ಕೆಲಸ ವಿಟಿಯು ಮಾಡುತ್ತಿದೆ ಎಂದು ಹೇಳಿದರು.

ವಿಟಿಯು ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಹಾಜರಿದ್ದರು. ಕುಲಸಚಿವ ಪ್ರೊ. ಆನಂದ ದೇಶಪಾಂಡೆ ಸ್ವಾಗತಿಸಿದರು. ವಿಟಿಯುನ ಕನ್ನಡ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ. ಸಿ. ಕೆ. ಸುಬ್ಬರಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೌಲ್ಯಮಾಪನ ಕುಲ ಸಚಿವ ಪ್ರೊ.ರಂಗಸ್ವಾಮಿ ವಂದಿಸಿದರು. ವಿಟಿಯು ಪ್ರಸಾರಾಂಗ ನಿರ್ದೇಶಕ ಪ್ರೊ.ಮಹಾಂತೇಶ ಹಾಗೂ ಸಂಯೋಜಕ ಪ್ರೊ. ಶಾಂತಾ ಪರಿಚಯಿಸಿದರು. ಬಸವಣ್ಣೆ ಕಂಬಾರ ನಿರೂಪಿಸಿದರು.


Leave A Reply

Your email address will not be published.