ಬೆಳಗಾವಿ ಪೊಲೀಸ್ ಆಯುಕ್ತರಾಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ


 

*ಮಾಜಿ ಮೇಯರ್ ಸರಿತಾ ಪಾಟೀಲ ತಲೆಮರೆಸಿಕೊಂಡಿದ್ದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲವೇಕೆ ?

*ಅಧಿವೇಶನ ವೇಳೆ ಪೊಲೀಸ್ ವೈಫಲ್ಯ

*ಇಡೀ ಸರಕಾರವೇ ಬೆಳಗಾವಿಯಲ್ಲಿ ಬೀಡು ಬಿಟ್ಟಾಗ ಹೊತ್ತಿ ಉರಿದ ನಗರ

*ತಲೆದಂಡದ ಚರ್ಚೆ ?

 

 

ಬೆಳಗಾವಿ :
ಬೆಳಗಾವಿ ಪೊಲೀಸ್ ಆಯುಕ್ತರಾಗಿ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಬೆಳಗಾವಿ ಪೊಲೀಸ್ ಆಯುಕ್ತರಾಗಿದ್ದ ತ್ಯಾಗರಾಜನ್ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ರಾಜ್ಯ ಸರಕಾರ ನಿನ್ನೆಯಷ್ಟೇ ಈ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

ತಲೆದಂಡ ವದಂತಿ :
ಡಿಸೆಂಬರ್ 15 ರಂದು ಆರಂಭಗೊಂಡಿದ್ದ ಬೆಳಗಾವಿ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳಾವ ನಡೆಸಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡಿಗರು ಎಂಇಎಸ್ ಮುಖಂಡರ ಮೇಲೆ ಮಸಿ ಎರಚಿದ್ದರು. ಇದರಿಂದ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು ಅವಮಾನ ಗೊಳಿಸಲಾಗಿತ್ತು. ಪ್ರತಿಯಾಗಿ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿತ್ತು. ಇತ್ತ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಎಂಇಎಸ್ ನವರು ಧ್ವಂಸಗೊಳಿಸಿದ್ದರು. ಅಂದೇ ಬೆಳಗಾವಿ ಮಹಾನಗರದಲ್ಲಿ ಅಧಿವೇಶನಕ್ಕೆ ಆಗಮಿಸಿದ್ದ ಸರಕಾರಿ ವಾಹನಗಳನ್ನು ಎಂ ಇಎಸ್ ಪುಂಡರು ಕಲ್ಲು ತೂರಿ ಹಾನಿಗೊಳಿಸಿದ್ದರು. ಪೊಲೀಸ್ ವೈಫಲ್ಯದ ವಿರುದ್ಧ ಆಡಳಿತ ಹಾಗೂ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಿಗೆ ಹಿರಿಯ ಅಧಿಕಾರಿಗಳ ತಲೆದಂಡದ ಚರ್ಚೆ ಆಗ ಮುನ್ನೆಲೆಗೆ ಬಂದಿತ್ತು. ಇದೀಗ ರಾಜ್ಯ ಸರಕಾರ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸುವ ಮೂಲಕ ಆಡಳಿತಕ್ಕೆ ಚುರುಕು ನೀಡುವತ್ತ ಗಮನ ಹರಿಸಿರುವುದು ಗಮನ ಸೆಳೆದಿದೆ.

 

ಈ ನಡುವೆ ಬೆಳಗಾವಿ ಮಹಾನಗರದ ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿದಂತೆ ಕೆಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೊಲೀಸ್ ಆಡಳಿತ ಇವರನ್ನು ಇದುವರೆಗೂ ಬಂಧಿಸುವಲ್ಲಿ ವಿಫಲರಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಘಟನೆ ಕರ್ನಾಟಕದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


Leave A Reply

Your email address will not be published.