ರಾಜಸ್ಥಾನದಲ್ಲಿ ಅಪಘಾತ; ಬೆಳಗಾವಿ ಯೋಧ ಸಾವು..!

ಸರಳ ಸಜ್ಜನಿಕ, ವಿನಯವಂತ, ಸ್ನೇಹಜೀವಿ ಪುತ್ರನನ್ನು ಕಳೆದುಕೊಂಡ ಇದ್ದಲಹೊಂಡ ಗ್ರಾಮ..!


ಬೆಳಗಾವಿ; ರಾಜಸ್ಥಾನದ ಮದ್ರಾಸ್ ರೆಜಿಮೆಂಟ್ ನ ಬಾರ್ಮೆರ್ ಮಿಲಿಟರಿ ಕ್ಯಾಂಪನಲ್ಲಿ ನಿನ್ನೆ (ಡಿಸೆಂಬರ್ 31 2021) ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಇದ್ದಲಹೊಂಡ ಗ್ರಾಮದ ಯೋಧ ಬಾಳಪ್ಪಾ ತಾನಾಜೀ ಮೋಹಿತೆ (32) ಸಾವನ್ನಪ್ಪಿದ್ದಾರೆ. ಮೃತ ಯೋಧ ಇತ್ತೀಚಿಗೆ ಹವಾಲ್ದಾರ್ ಬಡ್ತಿ ಪಡೆದು ರಾಜಸ್ಥಾನದ ಮದ್ರಾಸ್‌ ಇಂಜಿನಿಯರಿಂಗ್ ರೆಜಿಮೆಂಟ್ ಗೆ ಪೋಸ್ಟಿಂಗ್ ಮೇಲೆ ಹೋಗಿದ್ದರು. ನಿನ್ನೆ ರಾತ್ರಿ ಕರ್ತವ್ಯ ಮುಗಿಸಿಕೊಂಡು ಮನೆಗೆ ಬೈಕ್ ಮೇಲೆ ಬರುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಪರಿಚಯ..!

ಬೆಳಗಾವಿ ನಗರದಿಂದ 25 ಕಿಲೊಮೀಟರ್ ದೂರದಲ್ಲಿರುವ ಹಳೆ ಇದ್ದಲಹೊಂಡ ಗ್ರಾಮದಲ್ಲಿ ಬಾಳಪ್ಪಾ ಮೋಹಿತೆ 1989 ಜುಲೈ 25 ರಂದು ಮರಾಠಾ ಸಮಾಜದ ಅಲ್ಲಿನ ಪ್ರತಿಷ್ಠಿತ ಮೋಹಿತೆ ಕುಟುಂಬದ ತಾನಾಜೀ ಮತ್ತು ರತ್ನಾಭಾಯಿ ದಂಪತಿಗೆ ಜನಿಸಿದ್ದರು. ಕೇಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಬಾಳುಗೆ ತಾಯಿ, ಪತ್ನಿ ನರ್ಮತಾ, 5 ವರ್ಷದ ಪುತ್ರ ವಿನೀತ, ಸಹೋದರ ಮಹಾದೇವ, ಸಹೋದರಿ ಲಕ್ಷ್ಮಿ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

13 ವರ್ಷ ಸೈನ್ಯದಲ್ಲಿ ಸೇವೆ..

ಅಗಸಗಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಬೆಳಗಾವಿಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಪ್ಪಂದಿರಿಂದ ಪ್ರೇರಣೆಗೊಂಡ ಬಾಳು ಆಗಸ್ಟ್ 2009 ರಲ್ಲಿ ಸೇನೆಗೆ ಸೇರಿದ್ದರು. ಮದ್ರಾಸ್‌ ರೆಜಿಮೆಂಟ್ ನಲ್ಲಿ ತರಬೇತಿ ಮುಗಿಸಿ ನಂತರ ಹಲವು ಕಡೆ ಪೊಸ್ಟಿಂಗ್ ಮೇಲೆ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ರಾಜಸ್ಥಾನದ ಮದ್ರಾಸ್‌ ಗ್ರೂಪ್ ಆಪ್ ಇಂಜಿನಿಯರಿಂಗ್ ರೆಜಿಮೆಂಟ್, ಬಾರ್ಮೆರನಲ್ಲಿ ಹವಾಲ್ದಾರ ಆಗಿ ಸೇವೆಯಲ್ಲಿದ್ದರು.

ಕುಟುಂಬದ ಜತೆ ದುಃಖದ ಮಡುವಿನಲ್ಲಿ ಮುಳುಗಿದ ಅಕ್ಕ ಪಕ್ಕದ ಗ್ರಾಮಗಳು.

ಬಾಳು ನಿಧನದಿಂದ ಸ್ವಗ್ರಾಮ ಇದ್ದಲಹೊಂಡ, ನಿಂಗ್ಯಾನಟ್ಟಿ, ಶಿವಾಪೂರ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಮೃತ ಯೋಧನ ಕುಟುಂಬಕ್ಕೆ ಹಿರಿಯರು, ಗಣ್ಯ ಮಾನ್ಯರು, ರಾಜಕೀಯ ಮುಖಂಡರು ಸೇರಿದಂತೆ ಸಾಂತ್ವನ ಹೇಳಲು ಮಹಾಪೂರವೇ ಹರಿದು ಬರುತ್ತಿದೆ.

ಸಂತಾಪ ಸೂಚನೆ..!

ಯೋಧ ಬಾಳಪ್ಪಾ ಮೋಹಿತೆ ತನ್ನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಆಗಸಗಿ ಗ್ರಾಮದಲ್ಲಿ ಮುಗಿಸಿದ್ದರು. ಉತ್ತಮ ನಡತೆ, ಸರಳತೆ, ವಿನಯತೆ ಹಾಗೂ ಸೌಮ್ಯ ಸ್ವಭಾವ ಹೊಂದಿದ್ದ ಯೋಧನ ನಿಧನಕ್ಕೆ ಅಗಸಗಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಅಗಸಗಿ ಪ್ರೌಢಶಾಲೆಯ ಸ್ಥಾನಿಕ ಮಂಡಳಿಯ ಅಧ್ಯಕ್ಷರು , ನಿರ್ದೇಶಕರು ಹಾಗೂ ಶಿಕ್ಷಕ ವೃಂದದ ಸಿಬ್ಬಂದಿಗಳು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ನಾಳೆ ಅಂತ್ಯಕ್ರಿಯೆ ..!

ಮೃತ ಯೋಧನ ಅಂತ್ಯಕ್ರಿಯೆ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಇದ್ದಲಹೊಂಡ ಗ್ರಾಮದಲ್ಲಿ ಮರಾಠಾ ಸಾಮಾಜದ ವಿಧಿ ವಿಧಾನಗಳೊಂದಿಗೆ ಜರುಗಲಿದೆ.

ಯೋಧನ ದರ್ಶನ ಮತ್ತು ಅಂತ್ಯಕ್ರಿಯೆ ಬಗ್ಗೆ ಕಾಕತಿ ಪಿಐ ಗುರುನಾಥ ಐ ಎಸ್, ಪಿಎಸ್ಐ ಅವಿನಾಶ್ ಯರಗೊಪ್ಪ ಅಲ್ಲಿನ ಗ್ರಾ ಪಂ ಮುಖಂಡರ ಜೊತೆ ಚರ್ಚಿಸಿ ಸಿದ್ಧತೆ ನಡೆಸಿದ್ದಾರೆ.


Leave A Reply

Your email address will not be published.