ಭಾರತ -ರಷ್ಯಾ ,ದಿಗ್ಗಜ ನಾಯಕರ ಭೇಟಿಯ ಎರಡು ಐತಿಹಾಸಿಕ ಸಂದರ್ಭಗಳು

ಭಾರತ -ರಷ್ಯಾ ,ದಿಗ್ಗಜ ನಾಯಕರ ಭೇಟಿಯ ಎರಡು ಐತಿಹಾಸಿಕ ಸಂದರ್ಭಗಳು
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಸಂದರ್ಭ. ಯುದ್ಧದ ದಿನಗಳವು. 'ಉಕ್ಕಿನ ಮನುಷ್ಯ' ಎಂದೇ ಹೆಸರಾಂತ ಮಾರ್ಷಲ್ ಸ್ಟಾಲಿನ್ ಅಂದಿನ ರಷ್ಯಾಧಿಪತಿ. ಸರಳ ಸಜ್ಜನಿಕೆಯ ಪ್ರಭಾವಿ ವ್ಯಕ್ತಿತ್ವದ ರಾಧಾಕೃಷ್ಣನ್‌ರ ಬಗೆಗೆ ಮಾ . ಸ್ಟಾಲಿನ್ ಸಾಕಷ್ಟು ಕೇಳಿ ತಿಳಿದುಕೊಂಡಿದ್ದ. ಅಂತೆಯೇ ರಾಧಾಕೃಷ್ಣನರನ್ನು ಕಾಣಬೇಕೆಂಬ ಪ್ರಬಲ ಹಂಬಲ ಆತನದು. ಆದರೆ ಸಮಯದ ಅಭಾವ. ತಾವು ರಷ್ಯಾದಿಂದ ಭಾರತಕ್ಕೆ ಮರಳುವ ಪೂರ್ವದಲ್ಲಿ ಒಮ್ಮೆಯಾದರೂ ಮಾರ್ಷಲ್ ನನ್ನು ಭೇಟಿಯಾಗಲೇಬೇಕೆಂಬ ಸಂಕಲ್ಪ ರಾಧಾಕೃಷ್ಣನ್‌ರದು.

 ಅಂತೂ ಇಂತೂ ಕಾಲ ಕೂಡಿ ಬಂತು. ಉಭಯ ದಿಗ್ಗಜರ ಸಂದರ್ಶನಕ್ಕೆ ದಿನ ಸಮಯ ನಿಗದಿಯಾಯ್ತು. ಅದೊಂದು ಐತಿಹಾಸಿಕ ದಿನವೆಂದೇ ಹೇಳಬೇಕು. ಆ ಸಂದರ್ಭದಲ್ಲಿ ಮೇಧಾವಿ ರಾಧಾಕೃಷ್ಣನ್ ಸ್ಟಾಲಿನ್‌ರೆದುರು ರಾಷ್ಟ್ರ ಅಂತರಾಷ್ಟ್ರೀಯ ಮಹತ್ವದ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು. ಪರಸ್ಪರ ಚರ್ಚಿಸಿದರು. ರಾಧಾಕೃಷ್ಣನ್‌ರ ಚಿಂತನೆಗಳನ್ನು ಕೇಳಿದ ಸ್ಟಾಲಿನ್ , ಅವರ ವಿದ್ವತ್ತಿನಿಂದ ತುಂಬ ಪ್ರಭಾವಿತನಾದ, ಭೇಟಿಯ ಅವಧಿ ಮುಗಿಯುತ್ತಾ ಬಂತು. ರಾಧಾಕೃಷ್ಣನ್ ಸ್ಟಾಲಿನ್ ಕಟ್ಟಕಡೆಯ ಒಂದು ಪ್ರಶ್ನೆ ಕೇಳಿದರು. 

“ ಮಾರ್ಷಲ್ ಸ್ಟಾಲಿನ್ , ತಾವು ಯುದ್ಧವನ್ನೇಕೆ ನಿಲ್ಲಿಸಬಾರದು?” ಎಂದಾಗ ಸ್ಟಾಲಿನ್ , ಅದು ನನ್ನ ಕೈಯಲ್ಲಿ ಇಲ್ಲವೆಂದ. ಅದಕ್ಕೆ ರಾಧಾಕೃಷ್ಣನ್  ; ಮಾರ್ಷಲ್ , ಅದು ತಮ್ಮ ಕೈಯಲ್ಲೇ ಇದೆ ' ಎಂದರು. ಅದ್ಹೇಗೆ? ಎಂದರು. ಸ್ಟಾಲಿನ್ , ನೀವು ಒಂದು ಹೆಜ್ಜೆ ಹಿಂದೆ ಸರಿದರೆ ಸಾಕು. ವಿನಾಶಕಾರಿ ಯುದ್ಧ ತಾನೇ ತಾನಾಗಿ ನಿಂತು ಹೋಗುತ್ತದೆ  ಎಂದರು. ರಾಧಾಕೃಷ್ಣನ್.

ರಾಧಾಕೃಷ್ಣನ್‌ರ ಮಾತು ಕೇಳಿ ಮಾರ್ಷಲ್ ವಿಚಾರಮಗ್ನನಾದ ' ಹೌದಲ್ಲ , ರಾಧಾಕೃಷ್ಣನ್ ಹೇಳುವುದರಲ್ಲಿ ತುಂಬ ಅರ್ಥವಿದೆ ಎಂದು ಆ ಮಾತನ್ನೇ ಮೆಲುಕು ಹಾಕುತ್ತ ತಲ್ಲೀನತೆಗೆ ಜಾರಿದ ಮಾರ್ಷಲ್.

 ಸಂದರ್ಶನದ ಸಮಯ ಮುಗಿದ ಸಂಕೇತವನ್ನು ಅರಿತು ಎದ್ದು ನಿಂತ ಡಾ. ರಾಧಾಕೃಷ್ಣನ್ , ತಮ್ಮ ಕೈಯನ್ನು ಉದ್ದಕ್ಕೆ ಚಾಚಿ , ಸ್ಟಾಲಿನ್ ನ ಗಲ್ಲವನ್ನು ಮೃದುವಾಗಿ ತಟ್ಟಿದರು. ಅದು ವಾತ್ಸಲ್ಯಮಯಿ ಶಿಕ್ಷಕರ ಪ್ರೀತಿ, ಅಂತ:ಕರಣಗಳ ಪರುಷಸ್ಪರ್ಶ , ಪರಮಪ್ರೇಮ ಸ್ವರೂಪಿ ರಾಧಾಕೃಷ್ಣನ್‌ರ ಹಸ್ತಸ್ಪರ್ಶದಿಂದ ಉಕ್ಕಿನ ಮನುಷ್ಯ ಸ್ಟಾಲಿನ್ ಕರಗಿಯೇ ಹೋದ. ಕಣ್ಣೀರುಧಾರೆಯಾಗಿ ಹರಿಯಿತು. ಮಾರ್ಷಲ್ ಸ್ಟಾಲಿನ್ ಗೆ ಬಾಯ್ ಹೇಳಿ ಬೀಳ್ಕೊಂಡ ರಾಧಾಕೃಷ್ಣನ್ ಅಲ್ಲಿಂದ ತೆರಳಿದರು. ಮಾರ್ಷಲ್‌ರ ಕಲ್ಲು ಮನಸ್ಸು ಪರಿವರ್ತನೆ ಹೊಂದಿತು . ರಾಧಾಕೃಷ್ಣನ್ ಭಾರತಕ್ಕೆ ಮರಳಿ ಬಂದರು. ಆದರೆ ಸ್ಟಾಲಿನ್ ಬಹಳ ಕಾಲ ಬದುಕಲಿಲ್ಲ.

 ಅಂಥದೇ ಘಟನೆ 16 ಸೆಪ್ಟೆಂಬರ್ 2022 ರಂದು ಉಜ್ಬೇಕಿಸ್ತಾನದ ಸಮರ್ಕಂಡದಲ್ಲಿ ನಡೆದಿದೆ . ಎಂಥ ಅಪರೂಪ ಆಕಸ್ಮಿಕವಿದು . ಉಜ್ಬೇಕಿಸ್ಥಾನದ ಸಮರ್ಕಂಡದಲ್ಲಿ ಜರುಗಿದ ಶಾಂಘೈ  ಸಹಕಾರ ಸಂಘಟನೆಯ ( ಎಸ್.ಸಿ.ಓ ) ಶೃಂಗಸಭೆ ಹಿನ್ನೆಲೆಯಲ್ಲಿ ದಿಗ್ಗಜ ನಾಯಕರು ಸೇರಿದ್ದಾರೆ . ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ 16 ರಂದು ಭೇಟಿಯಾದ ಸಂದರ್ಭ. 'ನಾಳೆ ನಿಮ್ಮ 72 ನೆಯ ಹುಟ್ಟುಹಬ್ಬ , ಒಂದು ದಿನ ಮುಂಚಿತ ನಿಮಗೆ ಶುಭ ಕೋರುವ ಪದ್ಧತಿ ನಮ್ಮ ದೇಶದಲ್ಲಿಲ್ಲ. ನಾಳೆಯೇ ದೂರವಾಣಿ ಮೂಲಕ ಶುಭ ಕೋರುತ್ತೇನೆಂದರು'. ಪುಟಿನ್.

ನಂತರ ನಡೆದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಪುಟಿನ್‌ಗೆ 'ಇದು ಯುದ್ಧದ ಕಾಲವಲ್ಲ. ಸಂಘರ್ಷವನ್ನು ಕೊನೆಗೊಳಿಸಿರಿ. ಈ ಹಿಂದೆಯೂ ದೂರವಾಣಿ ಮೂಲಕ ನಿಮ್ಮೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹಲವಾರು ಬಾರಿ ಈ ಕುರಿತು ಚರ್ಚೆ ಮಾಡಿದ್ದೇವೆ. ಉಭಯ ದೇಶಗಳ ನಡುವಿನ ಸಂಘರ್ಷವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತವೆಂದು ಉಕ್ರೇನ್ - ರಷ್ಯಾ ಸಂಘರ್ಷ ಕುರಿತು ನೇರವಾಗಿಯೇ ಪ್ರಸ್ತಾಪಿಸಿದರು.

 ಪ್ರಧಾನಿ ಮೋದಿಯವರ ಮಾತಿಗೆ ಪ್ರತಿಕ್ರಿಯಿಸಿದ ಪುಟಿನ್, ' ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದ ಭಾರತದ ನಿಲುವು ಮತ್ತು ಕಳವಳ ನನಗೆ ಅರ್ಥವಾಗುತ್ತದೆ. ಶೀಘ್ರವೇ ಸಂಘರ್ಷ ಕೊನೆಗೊಳಿಸಲು ಪ್ರಯತ್ನ ಮಾಡುತ್ತೇನೆ ' ಎಂದರು. 

ಭಾರತದ ರಾಯಭಾರಿ ಡಾ.ರಾಧಾಕೃಷ್ಣನ್ ಮತ್ತು ಸ್ಟಾಲಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ಅವರ ಭೇಟಿಯ ಸಂದರ್ಭಗಳಲ್ಲಿ ಎಷ್ಟೊಂದು ಸಾಮ್ಯವಿದೆ.

ಭಾರತ 'ವಿಶ್ವಗುರು ' ಎಂಬ ಮಾನ್ಯತೆ ಪಡೆಯಿತ್ತಿರುವ ಸಂದರ್ಭದಲ್ಲಿ ಜಾಗತಿಕ ನಾಯಕರಾಗಿ ಹೊರಹೊಮ್ಮುತ್ತಿರುವ ಮೋದಿ ಪುಟಿನ್ ಗೆ ಹೇಳಿದ ಮಾತು , ಅದಕ್ಕೆ ಪುಟಿನ್‌ ಸಕಾರಾತ್ಮಕ ಸ್ಪಂದನೆ ಅತ್ಯಂತ ಗಮನಾರ್ಹ. ಬಲಾಢ್ಯ ರಷ್ಯಾಧಿಪತಿಗೆ ಹೀಗೆ ನೇರವಾಗಿ ಹೇಳುವ ನೈತಿಕತೆ ಮತ್ತು ಎದೆಗಾರಿಕೆ ಮೋದಿಯವರಿಗೆ ಮಾತ್ರ ಸಾಧ್ಯ . 

ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸೋಣ !

ಲೇಖನ - ಡಾ. ಬಸವರಾಜ ಜಗಜಂಪಿ