ಎಂಪಿ ಚುನಾವಣೆಗೆ ಈಗಲೇ ಲೆಕ್ಕಾಚಾರ ; ಮಂಗಲಾ ಅಂಗಡಿ ಕೈತಪ್ಪುತ್ತಾ  ಟಿಕೆಟ್ ?

ಎಂಪಿ ಚುನಾವಣೆಗೆ ಈಗಲೇ ಲೆಕ್ಕಾಚಾರ ; ಮಂಗಲಾ ಅಂಗಡಿ ಕೈತಪ್ಪುತ್ತಾ  ಟಿಕೆಟ್ ?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App


ಬೆಂಗಳೂರು /ದೆಹಲಿ :
2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಅಖಾಡ ಸಜ್ಜುಗೊಳಿಸುತ್ತಿದೆ. ಇದರಿಂದಾಗಿ ಹಾಲಿ ಸಂಸದರು 
ಅನಿವಾರ್ಯವಾಗಿ ತೆರೆಮರೆಗೆ ಸರಿಯಬೇಕಾಗುತ್ತದೆ. ಯುವಕರು, ವರ್ಚಸ್ವಿ ಹಾಗೂ ಕೆಲಸ ಮಾಡುವವರಿಗೆ 
ಲೋಕಸಭೆ ಟಿಕೆಟ್ ಕೊಡಲು ಬಿಜೆಪಿ ಸಿದ್ಧತೆಯಲ್ಲಿದೆ.
ಲೋಕಸಭಾ ಚುನಾವಣೆಗೆ ಹೊಸಬರಿಗೆ, ಅದರಲ್ಲೂ ಯುವಕರಿಗೆ ಮಣೆ ಹಾಕಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಕಾಲಕ್ಕೆ ಬಿಜೆಪಿಗಾಗಿ ಶಕ್ತಿಮೀರಿ 
ದುಡಿಯುವವರನ್ನು ಕರೆ ತಂದು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ಯೋಚಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿ ಅಂಗಳದಲ್ಲಿ ಇದೀಗ ತುರುಸಿನ ಚರ್ಚೆ ನಡೆಯುತ್ತಿದೆ.

ರಾಜ್ಯದ 8 ಲೋಕಸಭಾ ಕ್ಷೇತ್ರಗಳಲ್ಲಿ ಈಗಿನ ಹಾಲಿ ಸಂಸದರಿಗೆ ಟಿಕೆಟ್ ಕೊಡದೆ ಇರಲು ಕಮಲ ಪಕ್ಷ ನಿರ್ಧರಿಸಿದಂತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಮಂಗಲಾ
ಅಂಗಡಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆಯ ಪಿ. ಸಿ.ಗದ್ದಿಗೌಡರ್, ಹಾವೇರಿಯ ಶಿವಕುಮಾರ ಉದಾಸಿ, ತುಮಕೂರಿನ ಜಿ.ಎಸ್. ಬಸವರಾಜು, ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇಗೌಡ, ಬೆಂಗಳೂರು ಉತ್ತರದ ಡಿ.ವಿ. ಸದಾನಂದ ಗೌಡ, ಚಾಮರಾಜ ನಗರ ಕ್ಷೇತ್ರದ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಲು ಕಮಲ ಪಕ್ಷ ಗಂಭೀರವಾಗಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಶ್ರೀನಿವಾಸಪ್ರಸಾದ್, ಬಚ್ಚೇಗೌಡ, ಬಸವರಾಜು, ರಮೇಶ ಜಿಗಜಿಣಗಿ ಅವರಿಗೆ ವಯಸ್ಸಿನ 
ಕಾರಣದಿಂದ ಹಾಗೂ ಇತರ ಕೆಲ ಸಂಸದರಿಗೆ ಅವರ ಕಾರ್ಯವೈಖರಿ ಗಮನಿಸಿ ಕೈಬಿಡಲಾಗಿದೆ ಎನ್ನಲಾಗಿದೆ.

ಇತ್ತ 2021 ರಲ್ಲಿ 
ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ಅವರ ಧರ್ಮಪತ್ನಿ ಮಂಗಲಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಅನುಕಂಪದ ಅಲೆಯಲ್ಲಿ ಅವರು ಪ್ರಭಾವಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರ ಎದುರು ಕಡಿಮೆ ಅಂತರದ ಮತಗಳಿಂದ ಗೆಲುವಿನ ದಡ ಸೇರಿದ್ದರು. ಆದರೆ ಬರುವ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಮತ್ತೆ ಸ್ಪರ್ಧೆ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಮೂಲಕ ತಮಗೆ ರಾಜಕೀಯ
ಜೀವನದಲ್ಲಿ ಆಗಿರುವ ಪ್ರಥಮ ಸೋಲಿಗೆ ಸೇಡು ತೀರಿಸಬೇಕೆಂದು ಛಲದಲ್ಲಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಸಹ ಎಚ್ಚೆತ್ತಿದ್ದು ಸತೀಶ್ ಜಾರಕಿಹೊಳಿ ಅವರನ್ನು ಎದುರಿಸುವ, ಅವರಿಗೆ ಸರಿಸಾಟಿ ಪೈಪೋಟಿ 
ನೀಡಬಲ್ಲ ನಾಯಕರಿಗೆ ಮುಂದಿನ ಬಾರಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿದ್ದ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚು ಎನ್ನುತ್ತಿದೆ ಬಿಜೆಪಿ ಮೂಲಗಳು.

ಉಳಿದಂತೆ ಪಕ್ಷದ ಪ್ರಭಾವ  ಕಡಿಮೆ ಇರುವ ಕಳೆದ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಹಾಲಿ ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಸೆಳೆಯಲು ರಣತಂತ್ರ ರೂಪಿಸಲಾಗಿದೆ. ಚುನಾವಣೆ ಹತ್ತಿರವಾದಂತೆ ಬಿಜೆಪಿ ಪಾಳಯ ಸೇರುವುದು ಬಹುತೇಕ ನಿಶ್ಚಿತವಾದಂತಿದೆ. ಈ ಮೂಲಕ ಮೊದಲ ಬಾರಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ಕಮಲ ಅರಳಿಸುವ ತಂತ್ರ ರೂಪಿಸಲಾಗಿದೆ.  ಮಹಿಳಾ ಕೋಟಾದಡಿ ಸುಮಲತಾ ಅವರಿಗೆ ಬಿಜೆಪಿ ಸ್ಥಾನ ಕಲ್ಪಿಸಬಹುದು.

ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 28 ಲೋಕಸಭಾ ಸ್ಥಾನಗಳ ಪೈಕಿ 25 ರಲ್ಲಿ ಜಯಭೇರಿ ಬಾರಿಸಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಯ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ
ಸಾಬೀತುಪಡಿಸಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಕರ್ನಾಟಕ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಹೀಗಾಗಿ ಬಲಿಷ್ಠ ಸಂಸದರ ಪಡೆ ಕರ್ನಾಟಕದಿಂದ ಆರಿಸಿ ಕಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವರಿಷ್ಠರು ಈಗಲೇ ತೆರೆ ಮರೆಯಲ್ಲಿ ಯೋಜನೆ ಸಿದ್ಧಪಡಿಸುತ್ತಿದ್ದಾರೆ.