ಬೆಳಗಾವಿಯಲ್ಲಿ ಕಾವೇರಲಿದೆ ಗೋವಾ ಚುನಾವಣೆ...!
ರಾಷ್ಟ್ರೀಯ ಪಕ್ಷಗಳಿಂದ ರಣತಂತ್ರ ; ಬೆಳಗಾವಿಯ ಶಾಸಕರಿಂದಲೂ ಪ್ರಭಾವ...!

ಜನ ಜೀವಾಳ ವಿಶೇಷ ಬೆಳಗಾವಿ :
ನೆರೆಯ ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ಮಾರ್ಚ್ 10 ರವರೆಗೆ ಬೆಳಗಾವಿಯಲ್ಲೂ ಗೋವಾ ಚುನಾವಣೆ ಕಾವೇರುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಗೋವಾವನ್ನು ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಎಲ್ಲ ರಣ ತಂತ್ರಗಳನ್ನು ಹೆಣೆದು ಅಲ್ಲಿಯೇ ಠಿಕಾಣಿ ಹೂಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬಂದಿವೆ. ಈ ಬಾರಿ ಬೆಳಗಾವಿಯ ಶಾಸಕರು ಕೂಡ ಗೋವಾದಲ್ಲಿ ತಮ್ಮ ಪ್ರಭಾವ ತೋರುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಕರ್ನಾಟಕ ಹಾಗೂ ಗೋವಾ ನಡುವೆ ಒಂದೂವರೆ ದಶಕದಿಂದ ಕಳಸಾ ಬಂಡೂರಿ ವಿವಾದ ಕೆಲ ವೈಮನಸ್ಸಿಗೆ ಕಾರಣವಾಗಿದೆ. ಆದರೆ ಈಗ ಚುನಾವಣೆಯಲ್ಲಿ ಆ ವಿಷಯ ನಗಣ್ಯವಾಗಲಿದೆ.
ಗೋವಾ ಮತ್ತು ಕರ್ನಾಟಕದ ಬೆಳಗಾವಿ ನಡುವೆ ಬಹು ಹಿಂದಿನಿಂದಲೂ ಬಲವಾದ ಸಂಬಂಧವಿದೆ. ಗೋವಾ ವಿಮೋಚನಾ ಕಾಲಕ್ಕೆ ಅಲ್ಲಿನ ಹೋರಾಟವನ್ನು ಬೆಳಗಾವಿ ಕೇಂದ್ರಿತವಾಗಿಯೇ ನಡೆಸಲಾಗಿತ್ತು. ಹಲವು ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರು ಬೆಳಗಾವಿ ಮೂಲಕ ಗೋವಾಕ್ಕೆ ತೆರಳಿದ್ದರು. ಜತೆಗೆ ಬೆಳಗಾವಿ ಹಾಗೂ ಗೋವಾ ನಡುವೆ ಗಡಿ ಬಹಳ ವಿಸ್ತಾರವಾಗಿದ್ದು ಪರಸ್ಪರ ನಂಟು ಹೊಂದಿವೆ. ಈ ಅವಿನಾಭಾವ ನಂಟು ಇದೀಗ ಗೋವಾ ಚುನಾವಣೆ ಮೇಲೂ ಪ್ರಭಾವ ಬೀರಲಿದೆ.
ಗೋವಾ ವಿಧಾನಸಭೆ ಚುನಾವಣೆಗೆ ಕರ್ನಾಟಕ ಅದರಲ್ಲೂ ಬೆಳಗಾವಿ ಮೂಲದ ರಾಜಕಾರಣಿಗಳು ಸಕ್ರಿಯವಾಗಿ ಪಾಲ್ಗೊಂಡು ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿಯ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ್ ಹಟ್ಟಿಹೊಳಿ, ಅಂಜಲಿ ನಿಂಬಾಳ್ಕರ್, ಅನಿಲ್ ಬೆನಕೆ, ಅಭಯ ಪಾಟೀಲ ಸೇರಿದಂತೆ ದಿಗ್ಗಜ ನಾಯಕರು ಗೋವಾ ಪ್ರಚಾರಕ್ಕೆ ತೆರಳುವ ಸಾಧ್ಯತೆ ಹೆಚ್ಚಾಗಿದೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ಬೆಳಗಾವಿ ಕಾಂಗ್ರೆಸ್ ನಾಯಕರು ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಮುಖಂಡ ಸುನೀಲ್ ಹನುಮಣ್ಣನವರ ಈಗಾಗಲೇ ಗೋವಾ ಚುನಾವಣೆ ಕಾರ್ಯತಂತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುತ್ತಿದ್ದಾರೆ.
ಬಿಜೆಪಿ ಶಾಸಕರು, ಸಂಸದರು ನಾಯಕರು ಗೋವಾಕ್ಕೆ ಹಾರಲು ಸಿದ್ಧತೆ ನಡೆಸಿದ್ದು ಸದ್ಯದಲ್ಲೇ ಗೋವಾದಲ್ಲಿ ಠಿಕಾಣಿ ಹೂಡಿ ಚುನಾವಣಾ ಕಹಳೆ ಊದುವುದು ನಿಶ್ಚಿತ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಗೋವಾ ಚುನಾವಣೆ ಗೆಲ್ಲಲು ಬಿಜೆಪಿ ಭಾರಿ ರಣತಂತ್ರ ಹೆಣೆದಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಅವರಿಗೆ ಸಾಥ್ ನೀಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆಲ್ಲಲು ಕಾರ್ಯತಂತ್ರ ರೂಪಿಸಲಿದೆ. ಸದ್ಯ ಗೋವಾದಲ್ಲಿ ಬಿಜೆಪಿ ಆಡಳಿತ ಇದೆ. ಮನೋಹರ್ ಪರಿಕರ್ ನಿಧನ ನಂತರ ಗೋವಾ ಚುನಾವಣೆ ಎದುರಿಸಬೇಕಾದ ಸಂದಿಗ್ಧದಲ್ಲಿರುವ ಬಿಜೆಪಿ ಇದೀಗ ಎಲ್ಲಾ ರಣತಂತ್ರಗಳನ್ನು ಹೆಣೆದು ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟದ ಕಾಲಘಟ್ಟದಲ್ಲಿದೆ.
ಹೀಗಾಗಿ ಬಿಜೆಪಿ ಪ್ರಾಬಲ್ಯವಿರುವ ಕರ್ನಾಟಕದ ಸಚಿವರು, ಸಂಸದರು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ತೆರಳಿ ಅಬ್ಬರದ ಪ್ರಚಾರ ಮಾಡುವ ಸಾಧ್ಯತೆ ಇದೆ.
ಒಟ್ಟಾರೆ ಕಡಲ ಕಿನಾರೆ ಗೋವಾ ರಾಜ್ಯದ ಚುನಾವಣೆಯಲ್ಲಿ ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಆತಿರಥ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಚಾರ ಮಾಡಿ ಅಲ್ಲಿನ ಕೊಂಕಣಿ, ಮರಾಠಿ ಹಾಗೂ ಕನ್ನಡ ಭಾಷಿಗರ ಮತ ಪಡೆಯುವ ಕಾರ್ಯತಂತ್ರ ರೂಪಿಸಿ ಮತವಾಗಿ ಪರಿವರ್ತಿಸಲು ಸಿದ್ಧತೆ ನಡೆಸಿದ್ದಾರೆ.
ಮುಂದಿನ 2 ತಿಂಗಳುಗಳ ಕಾಲ ಗೋವಾ ಚುನಾವಣೆ ಕರ್ನಾಟಕದ ಮೇಲೆ ಭಾರೀ ಪರಿಣಾಮ ಬೀರಲಿದ್ದು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿರುವ ಗೋವಾ ಕದನದಲ್ಲಿ ಗೆದ್ದೇ ತೀರಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಅಣಿಯಾಗಿವೆ. ನೆರೆಯ ರಾಜ್ಯವಾಗಿರುವುದರಿಂದ ಕರ್ನಾಟಕದ ಬೆಳಗಾವಿ ಜಿಲ್ಲೆಗೆ ಗೋವಾ ಚುನಾವಣೆ ರಂಗು ಬರಲಿದೆ.