ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಗೊತ್ತೆ ಈ ರಹಸ್ಯ ಸಂಗತಿ 

ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಗೊತ್ತೆ ಈ ರಹಸ್ಯ ಸಂಗತಿ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಈ ರಹಸ್ಯ ಗೊತ್ತಿದೆಯೇ ? ನಿಜಕ್ಕೂ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಆಗ ಅವರು ಹುಟ್ಟಿರಲಿಲ್ಲ ಎಂ.ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲೆಯವರು ಇದೀಗ ಕಳೆದ 2 ವರ್ಷಗಳಿಂದ ಸ್ವಂತ ಜಿಲ್ಲೆಯಲ್ಲೇ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಸೌಭಾಗ್ಯ ಸಿಕ್ಕಿದೆ. ಇಂಥ ಘಟನೆಗಳು ಅಪರೂಪದಲ್ಲೇ ಅಪರೂಪ ಎನ್ನಬಹುದು.

ಎಂ.ಜಿ. ಹಿರೇಮಠ ಅವರ ತವರೂರು ಬೈಲಹೊಂಗಲ ತಾಲ್ಲೂಕಿನ ಗಣಿಕೊಪ್ಪ. ಅವರ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯವರೇ ಆಗಿರುವುದರಿಂದ ಅವರಿಗೆ ಜಿಲ್ಲೆಯ ಸಮಸ್ಯೆಗಳ ಇಂಚಿಂಚು ಅರಿವಿದೆ. ಅವರ ತವರು ಗಣಿಕೊಪ್ಪ ಗ್ರಾಮದ ಪರಿಸ್ಥಿತಿ 75 ವರ್ಷಗಳ ಹಿಂದೆ ಹೇಗಿತ್ತು ಗೊತ್ತೆ ?

'ಜನ ಜೀವಾಳ'ದ ಗಣಿಕೊಪ್ಪ ಬರಹಗಾರ ಬ.ಚ. ಚಿಕ್ಕಮಠ ಅವರು ಬರೆದ ಬರಹ ಇಲ್ಲಿದೆ ನೋಡಿ.....

ಹಳ್ಳಿ ಭಾರತದ ಸಂಜೀವ ಬಳ್ಳಿ...

ಗಣಿಕೊಪ್ಪ ಹಳ್ಳಿಯ ಬತ್ತಲೆ ಚಿತ್ರ

ಬೈಲಹೊಂಗಲ ತಾಲ್ಲೂಕಿನ ಗಣಿಕೊಪ್ಪ ಎಂಬ ಊರಲ್ಲಿ ಜನವಸತಿ ಇದ್ದರು ಹಾಳುಬಿದ್ದಂತೆ ತೋರುವುದು.  ಜನರಲ್ಲಿ ಉತ್ಸಾಹವಿಲ್ಲ. ನಿರಾಶೆ ಮನೆ ಮಾಡಿದೆ. ಅಲ್ಲಿ ದಾರಿದ್ರ್ಯ ಬೀಡುಬಿಟ್ಟಿದೆ. ಸಾಲೆ ಇಲ್ಲ. ಕುಡಿಯುವ ನೀರಿನ ಅನುಕೂಲತೆ ಇಲ್ಲ. ರೋಗರುಜಿನಗಳ ತವರು ಮನೆಯಂತಿದೆ ಅದು. ಜನರೆಲ್ಲ ಅಜ್ಞಾನದ  ಕಗ್ಗತ್ತಲೆಯಲ್ಲಿ ಮುಳುಗಿದ್ದಾರೆ. ಅವರು ಬೆಳಕು ಕಾಣುವ ಆಶೆ ಇಲ್ಲ. ಬಡತನ ಅವರನ್ನು ಹಿಂಡಿ ಹಿಪ್ಪಿ ಮಾಡಿದೆ. ಮಾರ್ಗಗಳ ಅನುಕೂಲತೆಯಂತೂ, ಕನಸಿನಲ್ಲಿಯೂ ಆಸಿಸದ ಮಾತಾಗಿದೆ. ಭರತಭೂಮಿಯಲ್ಲಿ ಹಿಂದುಳಿದ ಹಳ್ಳಿಗಳಲ್ಲಿ ಯಾವುದು ಯಾವುವೂ ಇದಕ್ಕೆ ಸಮವೆನಿಸಲಾರವು. ಹೀಗಿದ್ದೂ ಅಲ್ಲಿ ನೈಸರ್ಗಿಕ ಸಂಪತ್ತು ವಿಫಲವಾಗಿದೆ. ದೇವರ ದೇವನು ಒಲಿದಿತ್ತ ಭೂಮಿ, ಅಡವಿ, ಹಳ್ಳ ಇವುಗಳ ಅನುಕೂಲತೆ ಸಾಕಷ್ಟಿದೆ. ಇದರ ಉಪಯೋಗ ಮಾಡಿಕೊಳ್ಳುವಷ್ಟು ಬುದ್ಧಿ, ಸಾಮರ್ಥ್ಯ, ಅನುಕೂಲತೆಗಳು ಜನರಲ್ಲಿ ಇರುವುದಿಲ್ಲ. ಹಳ್ಳಕ್ಕೊಂದು ತಡೆಹಾಕಿದರೆ ತೋಟಪಟ್ಟಿ ಗಳಿಂದ ಕಂಗೊಳಿಸುವ ಸುಂದರ ಸುಖಮಯ ನೋಟವನ್ನು ಕಾಣಬಹುದು. ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿರುವ ಪಾಡು ವರ್ಣನೆಗೆ ನಿಲುಕದು. ಅನಾರೋಗ್ಯಕ್ಕೆ  ಮೂಲವಾದ ನೀರಿನ ಸಮಸ್ಯೆ ಬಿಡಬೇಕಾದರೆ ಆ ಊರಿಗೊಂದು ಕುಡಿಯುವ ನೀರಿನ ಬಾವಿ ಅವಶ್ಯಕ ಹಳ್ಳದ ಕಳಕು ನೀರು ಕುಡಿದು ಜನರು ಬಳಲುತ್ತಿದ್ದಾರೆ. ಜನಗಳ ಏಳ್ಗೆಯು ಆಗುತ್ತಿಲ್ಲ.

ಕೈ ಹಿಡಿಯುವವರಾರೂ ಇಲ್ಲ!
 ಈ ಮೊದಲು ಅದೆಷ್ಟೋ ಜನರು ಮತದೊರಕಿಸುವುದಕ್ಕಾಗಿ ಬಂದಾಗ ಜನರ ಬೇಡಿಕೆಗಳನ್ನು  ವಚನವಿತ್ತವರು ಮತ್ತೊಮ್ಮೆ ಇಣುಕಿ ಸಹ ನೋಡಿಲ್ಲ. ರಾಷ್ಟ್ರ ಮಹಾಸಭೆಯ (ಕಾಂಗ್ರೆಸ್) ಕಾರ್ಯಕರ್ತರು ಹಲವು ಬಾರಿ ಮಾತು ಕೊಟ್ಟಂತಾಯಿತು. ಅವರು ಕಡೆಗಣಿಸಿದರು. ರೈತ ಸಂಘಟನೆ ಮಾಡಿ, ರೈತರ ಕಲ್ಯಾಣ ಮಾಡುತ್ತೇವೆಂದು ಸಾರಿದ ರೈತಸಂಘವೂ ವಚನವಿತ್ತು ಮಾಯವಾಯ್ತು. ಇನ್ನಾವ ಸಂಘಗಳು ತಲೆಯೆತ್ತಿ ಇದನ್ನು ಉದ್ಧರಿಸುವವೋ ಏನೋ!

ಮುಂದೇನು? ಒಟ್ಟಿನಲ್ಲಿ ನಮ್ಮ ಜಿಲ್ಲೆಯೊಳಗಿನ ಅತ್ಯಂತ ಕಾಡುಮಯ ಸ್ಥಿತಿಯುಳ್ಳ ಊರುಗಳನ್ನು ಮೊದಲು ಆಯ್ದುಕೊಂಡು ಸಾವಧಾನದಿಂದಲಾದರೂ, ಶಕ್ಯವಿದ್ದಷ್ಟನ್ನು, ನಿಷ್ಪಕ್ಷಪಾತತನದಿಂದ,ಸುಧಾರಣೆಗೈಯಲುದ್ಯುಕ್ತರಾಗುವುದರಿಂದ ಹಳ್ಳಿಗಳ ಬೀಡಾದ ನಮ್ಮ ಭಾರತವು  ಮತ್ತೊಮ್ಮೆ ನಂದನವನವಾಗಿ ರಾಮರಾಜ್ಯವನ್ನು ಕಾಣಬೇಕೆಂಬ ಕನಸು ನನಸಾಗಬಹುದು.